ಬೆಂಗಳೂರು : ಕರ್ತವ್ಯಲೋಪ ಎಸಗಿದ ಪೊಲೀಸ್ ಇನ್ಸ್ ಪೆಕ್ಟರ್ ಗೆ ಒಂದು ವಾರಗಳ ತನಕ ರಸ್ತೆ ಸ್ವಚ್ಛಗೊಳಿಸುವ ಶಿಕ್ಷೆ ನೀಡಿ ಕಲಬುರ್ಗಿ ಹೈಕೋರ್ಟ್ ವಿಭಾಗೀಯ ಪೀಠ (Kalburgi Bench) ಆದೇಶ ನೀಡಿದೆ. ಮಗ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಲು ತೆರಳಿದ ಮಹಿಳೆಯಿಂದ ದೂರು ಸ್ವೀಕರಿಸಲು ಮತ್ತು ತನಿಖೆ ನಡೆಸಲು ವಿಫಲವಾದ ಪೊಲೀಸ್ ಇನ್ಸ್ ಪೆಕ್ಟರ್ ಗೆ ರಾಜ್ಯ ಹೈಕೋರ್ಟ್ ಈ ಅಪರೂಪದ ಶಿಕ್ಷೆ ಪ್ರಕಟಿಸಿದೆ. ಮುಂದಿನ ಒಂದು ವಾರಗಳ ತನಕ ಠಾಣೆಯ ಮುಂದಿನ ಮುಖ್ಯ ರಸ್ತೆಯನ್ನು ಸ್ವಚ್ಛಗೊಳಿಸಲು ಹೇಳಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಮಿಣಜಗಿ ತಾಂಡದ ತಾರಾಬಾಯಿ ಎಂಬವರು ತನ್ನ ಪುತ್ರ ಸುರೇಧ್ ಕಾಣೆಯಾಗಿದ್ದಾನೆ ಎಂದು, ಅಕ್ಟೋಬರ್ 20ರಂದು ದೂರು ನೀಡಲು ಕಲಬುರ್ಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ತೆರಳಿದ್ದರು. ಆದರೆ ಅಲ್ಲಿಯ ಇನ್ಸ್‌ಪೆಕ್ಟರ್ ಮಹಿಳೆಯಿಂದ ದೂರು ಸ್ವೀಕರಿಸಲಿಲ್ಲ. ಅಲ್ಲದೆ, ಕಾಣೆಯಾದ ಯುವಕನನ್ನು ಪತ್ತೆ ಮಾಡಲೂ ಇಲ್ಲ. ತನ್ನ ಮಗನಿಗಾಗಿ ಹುಡುಕಾಟ ನಡೆಸಿ ಬೇಸತ್ತ ತಾಯಿ, ಕೊನೆಗೆ ಹೈಕೋರ್ಟ್ ನಲ್ಲಿ (High Court) ಹೆಬಿಯಸ್ ಕಾರ್ಪಸ್ (Hebeas Corpus) ಅರ್ಜಿ ಸಲ್ಲಿಸಿದ್ದರು. ತನ್ನ ಮಗನನ್ನು ಹುಡುಕಿ ನ್ಯಾಯಾಲಯದ ಮುಂಜೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸುವಂತೆ ನ್ಯಾಯಾಲಯವನ್ನು ಕೋರಿದ್ದರು. ಇದಾದ ಬಳಿಕ ನ್ಯಾಯಾಲಯದ (court) ಆದೇಶದ ಮೇರೆಗೆ ಕಾಣೆಯಾದ ಯುವಕನನ್ನು ಪತ್ತೆ ಹಚ್ಚಿದ ಪೊಲೀಸರು ನ.3ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ ಮಗ ಕಾಣೆಯಾಗಿದ್ದಾನೆಂದು ಬಂದ ತಾಯಿ, ತನ್ನ ಪುತ್ರನನ್ನು ಹುಡುಕಲು ಕೋರ್ಟ್ ಮೆಟ್ಟಿಲು ಏರುವಂಥ ಸ್ಥಿತಿ ಬಂದಿರುವ ಬಗ್ಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಯುವಕನ ತಾಯಿ ತಾರಾಬಾಯಿ ದೂರು ನೀಡಲು ಠಾಣೆಗೆ ಬಂದಿರುವ ಬಗ್ಗೆ ಪೊಲೀಸರು ಒಪ್ಪಿಕೊಳ್ಳುತ್ತಾರೆ. ಆದರೆ ದೂರು ಮಾತ್ರ ಸ್ವೀಕರಿಸಲಿಲ್ಲ. ಇದು ಕರ್ತವ್ಯಲೋಪವನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.