ಮುಧೋಳ – ನಿರಾಣಿ ಉದ್ಯಮ ಸಮೂಹ ಸಂಸ್ಥೆಯ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಲಿಮಿಟೆಡ್ ಸೌಹಾರ್ದ ಸಹಕಾರಿ ಕ್ಷೇತ್ರದಲ್ಲಿ ಅಲ್ಪಾವಧಿಯಲ್ಲಿಯೇ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿ ಸಮವಾಗಿ ಸೇವೆ ನೀಡುವಷ್ಟು ಸದೃಢವಾಗಿ ಬೆಳೆದು ನಿಂತಿದೆ. ವಿನೂತನ ಯೋಜನೆಗಳೊಂದಿಗೆ ಮಹತ್ತರ ಹೆಜ್ಜೆ ಗುರುತುಗಳನ್ನು ಮೂಡಿಸುವ ಮೂಲಕ ಗ್ರಾಹಕರ ವಿಶ್ವಾಸಾರ್ಹ ಸಂಸ್ಥೆಯಾಗಿ ಹೊರಹೊಮ್ಮಿದ್ದು ಹೆಮ್ಮೆಯ ಸಂಗತಿ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಬೀಳಗಿ ಶಾಸಕ ಮುರುಗೇಶ ನಿರಾಣಿ ತಿಳಿಸಿದರು.
ಮುಧೋಳದ ಸಹಕಾರಿಯ ಪ್ರಧಾನ ಕಚೇರಿ ಸಭಾಭವನದಲ್ಲಿ ನಡೆದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಾದ್ಯಂತ ೫೩ ಶಾಖೆಗಳನ್ನು ಹೊಂದಿದ ವಿಜಯ ಸೌಹಾರ್ದ ಸಹಕಾರಿಯು ಠೇವಣಿದಾರರ ನೆಚ್ಚಿನ ಸಹಕಾರಿಯಾಗಿ ಅಭಿವೃದ್ದಿ ಹೊಂದಿದ್ದು ೬೦೦ ಕೋಟಿ ರೂ.ಗಳ ಠೇವಣಿ ಹೊಂದಿದೆ. ೭,೦೦೦ ಸಾವಿರ ಕೋಟಿ ರೂ. ವಾರ್ಷಿಕ ಆರ್ಥಿಕ ವಹಿವಾಟು ಹೊಂದಿದ್ದು, ಸನ್ ೨೦೧೯-೨೦ನೇ ಸಾಲಿನಲ್ಲಿ ನಿವ್ವಳ ೧.೯೫ ಕೋಟಿ ರೂ.ಗಳ ಲಾಭ ಗಳಿಸಿದೆ. ಸಹಕಾರಿಯ ಸದಸ್ಯರಿಗೆ ದಾಖಲೆಯ ಶೇ.೨೫ ರಷ್ಟು ಲಾಭಾಂಶ ಹಂಚಿಕೆ ಮಾಡಿದ್ದು ಲೆಕ್ಕಪತ್ರ ಪರಿಶೋಧನೆಯಲ್ಲಿ ಎ ಶ್ರೇಣಿ ವರ್ಗಿಕರಣವನ್ನು ನಿರಂತರ ಕಾಯ್ದುಕೊಂಡಿದ್ದು ಸಹಕಾರಿ ಸಾಧನೆ ಎಂದು ಅವರು ತಿಳಿಸಿದರು.
ಮುಧೋಳದಲ್ಲಿ ೨೦೦೭-೦೮ರಲ್ಲಿ ಆರಂಭಗೊಂಡ ಸಂಸ್ಥೆಯು ಇಂದು ವಿಶಾಲ ಕರ್ನಾಟಕದಾದ್ಯಂತ ಶಾಖೆಗಳನ್ನು ಹೊಂದಿ ರಾಜ್ಯದ ಜನತೆಗೆ ಉತ್ತಮ ಸೇವೆ ನೀಡುತ್ತಿದೆ. ೧.೨೦ ಕೋಟಿ ಶೇರು ಬಂಡವಾಳ ಹೊಂದಿದ ಸಹಕಾರಿಯು ೪೮೦ ಕೋಟಿ ರೂ ಸಾಲ ವಿತರಿಸಿ, ೧೨೦ ಕೋಟಿ ರೂ.ಗಳನ್ನು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದು, ಆರ್ಥಿಕವಾಗಿ ತುಂಬ ಸದೃಢವಾಗಿದೆ ಎಂದು ಅವರು ಹೇಳಿದರು.
ಮುಧೋಳ ನಗರದ ನಿರಾಣಿ ಕಾರ್ಖಾನೆ ಆವರಣದಲ್ಲಿ ಸುಸಜ್ಜಿತ ಪ್ರಧಾನ ಕಛೇರಿ ಹೊಂದಿದ್ದು, ಜಮಖಂಡಿ ಶಾಖೆಯ ಸ್ವಂತ ಕಟ್ಟಡ ನಿರ್ಮಾಣ ಹಂತದಲ್ಲಿದೆ.
ಮುಂಬರುವ ದಿನಗಳಲ್ಲಿ ರಬಕವಿ, ಬನಹಟ್ಟಿ, ಬೀಳಗಿ ಶಾಖೆಗಳಿಗೂ ಸ್ವಂತ ಕಟ್ಟಡಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಸಂಸ್ಥೆಯು ೩೫೦ ಜನ ಸಿಬ್ಬಂದಿಗೆ ಬದುಕು ರೂಪಿಸಿಕೊಟ್ಟಿದೆ ಎಂದರು.
ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಲ್ಲಿ ವಿಜಯ ಸಹಕಾರಿ ಸದಾ ಮುಂದಿದೆ. ಸೌಹಾರ್ದ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಮೊಟ್ಟ ಮೊದಲು ವಿಜಯ ಪೇ ಮೊಬೈಲ್ ಬ್ಯಾಂಕಿಂಗ್ ಸೇವೆ ಹಾಗೂ ಎಟಿಎಂ ಸೇವೆಯನ್ನು ಆರಂಭಿಸಿದ ಹೆಗ್ಗಳಿಕೆ ವಿಜಯ ಸಹಕಾರಿಗಿದೆ. ಗ್ರಾಹಕರಿಗೆ ತ್ವರಿತ ಹಾಗೂ ನಿಖರ ಸೇವೆ ಒದಗಿಸುವಲ್ಲಿ ನಿರತರಾಗಿರುವ ಸಹಕಾರಿ ಹೊಸಯುಗದ ಹಣಕಾಸು ವರ್ಗಾವಣೆ ವ್ಯವಸ್ಥೆಗಳಾದ ಆರ್.ಟಿ.ಜಿ.ಎಸ್., ಎನ್.ಇ.ಎಫ್.ಟಿ. ಸೌಲಭ್ಯ ಅಳವಡಿಸಿಕೊಂಡಿದೆ. ಗ್ರಾಹಕರ ಸಹಕಾರದಿಂದ ಇಷ್ಟೆಲ್ಲ ಸಾಧನೆ ಸಾಧ್ಯವಾಗಿದ್ದು, ರೈತರು, ಕಾರ್ಮಿಕರೇ ಅತಿ ಹೆಚ್ಚು ಸದಸ್ಯರಾಗಿರುವ ನಮ್ಮ ಸಹಕಾರಿಯಲ್ಲಿ ಅವರ ಅಗತ್ಯತೆಗಳಿಗೆ ತಕ್ಕಂತೆ ಮತ್ತಷ್ಟು ಸೌಲಭ್ಯ ಹಾಗೂ ಸೇವೆಯನ್ನು ವಿಸ್ತರಿಸುವ ಮೂಲಕ ರಾಜ್ಯದಲ್ಲಿಯೇ ನಂ.೧ ಸಹಕಾರಿಯನ್ನಾಗಿಸುವ ಸಂಕಲ್ಪ ಹೊಂದಿದ್ದೇವೆ ಎಂದು ಮುರುಗೇಶ ನಿರಾಣಿ ತಿಳಿಸಿದರು.
ಸಹಕಾರಿ ಅಧ್ಯಕ್ಷ ವಿ.ಪ.ಸದಸ್ಯ ಹಣಮಂತ ನಿರಾಣಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಜನರಲ್ ಮ್ಯಾನೇಜರ್ ಎಚ್. ಪತ್ತೇನ್ನವರ ವಾರ್ಷಿಕ ವರದಿ ವಾಚನ ಮಾಡಿದರು. ಸಂಗಮೇಶ ನಿರಾಣಿ , ಕೃಷ್ಣಗೌಡ ಪಾಟೀಲ, ರಾಚಪ್ಪಣ್ಣ ಕರೆಹೊನ್ನ, ಪಿ. ಆರ್. ಗೌಡರ್, ಎಸ್. ಆರ್. ಹಿಪ್ಪರಗಿ, ಸೋಮಶೇಖರ ಗೋಸಾರ ಹಾಗೂ ಸಹಕಾರಿ ಸದಸ್ಯರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.