ಬೆಂಗಳೂರು: ಸ್ವಾಭಿಮಾನಿ ಕನ್ನಡಿಗರ ಪಕ್ಷ ಜೆಡಿಎಸ್ ಎಂದಿಗೂ ವಿಲೀನದ ಆಲೋಚನೆ ಮಾಡುವುದಿಲ್ಲ. ಜನರ ಗಟ್ಟಿ ಧ್ವನಿಯಾದ ಜೆಡಿಎಸ್ ಅಂತಹ ಅವಿವೇಕತನ ಪ್ರದರ್ಶನ ಮಾಡುವುದಿಲ್ಲ. ಅಗತ್ಯವಿದ್ದಾಗ ವಿಷಯಾಧಾರಿತವಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ಜೊತೆ ವಿಶ್ವಾಸಪೂರ್ವಕವಾಗಿ ನಡೆಯಬಹುದಷ್ಟೆ. ವಿಲೀನದಂಥ ಕಪೋಲಕಲ್ಪಿತ ಸುದ್ದಿಗಳಿಗೆ ಯಾವುದೇ ಪ್ರಾಮುಖ್ಯತೆ ಇಲ್ಲ. ನಾನು ಬದುಕಿರುವ ತನಕ ಇದು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
`ರೈತರ ಸಾಲಮನ್ನಾ’, `ಬಡವರ ಬಂಧು’ ಇಂತಹ ಕಾರ್ಯಕ್ರಮಗಳನ್ನು ನೀಡಿದ, ಶಿಸ್ತುಬದ್ಧ ಆಡಳಿತ ನಡೆಸಿದ, ದೇವೇಗೌಡರ ಆಶಯದಂತೆ ನಡೆಯುತ್ತಿರುವ ಜೆಡಿಎಸ್ ಮೇಲೆ ಜನರ ವಿಶ್ವಾಸವಿದೆ. ಮತ್ತೊಂದು ಪಕ್ಷದೊಂದಿಗೆ ವಿಲೀನ ಮಾಡಿಕೊಳ್ಳುವ ಮೂಲಕ `ಸ್ವಯಂ ಆತ್ಮಹತ್ಯೆ’ ಮಾಡಿಕೊಳ್ಳುವ ಸನ್ನಿವೇಶ ಬಂದಿಲ್ಲ, ಬರುವುದೂ ಇಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ ಎಂದು ಟ್ವಿಟರ್ ನಲ್ಲಿ ಹೆಚ್‍ಡಿಕೆ ತಿಳಿಸಿದ್ದಾರೆ.