ಬೆಂಗಳೂರು, ಡಿ.20- ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಇನ್ನೊಂದೇ ದಿನ ಬಾಕಿ ಇದ್ದು, ನಾನಾ ತಂತ್ರಗಳ ಮೂಲಕ ಮತದಾರರ ಮನಗೆಲ್ಲಲು ಕಣದಲ್ಲಿರುವ ಅಭ್ಯರ್ಥಿಗಳು ಅಂತಿಮ ಕಸರತ್ತು ನಡೆಸಿದ್ದಾರೆ.ನಗರ, ಪಟ್ಟಣ ಪ್ರದೇಶಗಳಿಗೆ ಹೊಂದಿಕೊಂಡಂತಿರುವ ಗ್ರಾಪಂಗಳಲ್ಲಿ ಹಣ ಹಂಚಿಕೆ, ಗುಂಡು-ತುಂಡು ಪಾರ್ಟಿ ಭರ್ಜರಿಯಾಗಿಯೇ ನಡೆದಿದೆ.
ತೋಟದ ಮನೆ, ಡಾಬಾ, ಇಟ್ಟಿಗೆ ಶೆಡ್ ಎಲ್ಲೆಂದರಲ್ಲಿ ಪಾರ್ಟಿಗಳನ್ನು ಆಯೋಜಿಸಿ ಮತದಾರರ ಮನವೊಲಿಕೆಯ ಕಸರತ್ತು ನಡೆಯುತ್ತಿದೆ. ಅದರ ಜತೆಗೆ ಹಣ ಇನ್ನಿತರ ಆಮಿಷಗಳ ಸುರಿಮಳೆಯಾಗುತ್ತಿದೆ. ಇನ್ನು ರಿಮೋಟ್ ಏರಿಯಾಗಳಲ್ಲಿರುವ ಗ್ರಾಪಂಗಳಲ್ಲಿ ಚುನಾವಣಾ ಪ್ರಚಾರದ ಕಾವು ಅಷ್ಟಾಗಿ ಕಂಡುಬರುತ್ತಿಲ್ಲ.
ಮನೆಮನೆಗೆ ತೆರಳಿ ಮತಯಾಚನೆ ಮಾಡುವುದು, ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡುತ್ತಿರುವುದು ಕಂಡುಬರುತ್ತಿದೆ. ಗ್ರಾಮಗಳಲ್ಲಿ ಬಾಡೂಟದ ಪಾರ್ಟಿಗಳು ಸಾಮಾನ್ಯವಾಗಿದ್ದು, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ವಿವಿಧ ಕಸರತ್ತುಗಳನ್ನು ಮಾಡುತ್ತಿದ್ದಾರೆ.
ಆಣೆ, ಪ್ರಮಾಣದ ರಾಜಕೀಯವೂ ಕೂಡ ನಡೆಯುತ್ತಿದೆ. ಪಕ್ಷದ ಮುಖಂಡರೊಂದಿಗೆ ಮನೆಮನೆಗೆ ತೆರಳಿ ಎಲೆ-ಅಡಿಕೆ ಜತೆಗೆ ಹಣವನ್ನಿಟ್ಟು ಕೊಟ್ಟು ಮತವನ್ನು ಖಾತ್ರಿ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮದಿಂದ ಹೊರಗೆ ಹೋಗಿ ನೆಲೆಸಿರುವವರನ್ನು ಚುನಾವಣಾ ದಿನದಂದು ಊರಿಗೆ ಕರೆಸಿಕೊಳ್ಳುವ ಪ್ರಯತ್ನ ನಡೆದಿದೆ. ಈಗಾಗಲೇ ದೂರವಾಣಿ ಮೂಲಕ ಎಲ್ಲರನ್ನೂ ಸಂಪರ್ಕಿಸಿ ಚುನಾವಣಾ ದಿನಾಂಕದಂದು ಊರಿಗೆ ಬಂದು ಮತ ಹಾಕುವಂತೆ ಮನವೊಲಿಸುವ ಪ್ರಯತ್ನ ನಡೆದಿದೆ.