ಬೆಂಗಳೂರು : ಆರ್.ಎನ್.ಎಸ್. ಶಿಕ್ಷಣ ಮತ್ತು ಉದ್ಯಮ ಸಮೂಹಗಳ ಸ್ಥಾಪಕರು ಹಾಗೂ ಸಮಾಜಮುಖಿ ಚಿಂತಕ ಮತ್ತು ದಾನಿ, ಶ್ರೀ ಆರ್.ಎನ್. ಶೆಟ್ಟಿ (92) ಗುರುವಾರ ಡಿ.17ರ ನಸುಕಿನ 2 ಗಂಟೆ ಸುಮಾರಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಉತ್ತರ ಹಳ್ಳಿಯ ಆರ್.ಎನ್. ಎಸ್. ತಾಂತ್ರಿಕ ವಿದ್ಯಾಲಯ ಕಾಲೇಜು ಆವರಣದಲ್ಲಿ ಮಧ್ಯಾಹ್ನ 2 ಗಂಟೆಯ ನಂತರ ಇಡಲಾಗುವುದು, ಅಂತ್ಯಸಂಸ್ಕಾರ ಸಂಜೆ ನೆರವೇರಿಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಆರ್. ಎನ್. ಶೆಟ್ಟಿ ಅವರ ಸಾಧನೆ – ಸಾಕಾರ
ಉತ್ತರ ಕನ್ನಡ ಜಿಲ್ಲೆಯ ಪವಿತ್ರ ಪುಣ್ಯ ಕ್ಷೇತ್ರ ಮುರುಡೇಶ್ವರದಲ್ಲಿ 1928ರ ಆಗಸ್ಟ್ 15ರಂದು ಜನಿಸಿದ ಆರ್.ಎನ್. ಶೆಟ್ಟಿ ಅವರು ರಾಜ್ಯದ ಮತ್ತು ದೇಶದ ಪ್ರಗತಿಗೆ ತಮ್ಮದೇ ಕೊಡುಗೆ ನೀಡಿದ್ದ ಹೆಸರಾಂತ ಉದ್ಯಮಿಯಾಗಿದ್ದರು.
ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ವೈದ್ಯಕೀಯ, ಆತಿಥ್ಯ, ವಸತಿ, ಔದ್ಯಮಿಕ, ಔದ್ಯೋಗಿಕ, ವಾಣಿಜ್ಯ, ಶೈಕ್ಷಣಿಕ, ಮೂಲಸೌಕರ್ಯ, ವಿದ್ಯುತ್ ಹಾಗೂ ನೀರಾವರಿ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ಆರ್.ಎನ್. ಶೆಟ್ಟಿ ಅವರು ಛಾಪು ಮೂಡಿಸಿದ್ದರು. ಕರ್ನಾಟಕದ ಅಭಿವೃದ್ಧಿಗೂ ಅವರು ನೀಡಿರುವ ಕೊಡುಗೆ ಅಸಾಧಾರಣ.
1961ರಲ್ಲಿ ಮೂಲಸೌಕರ್ಯ ಕಂಪನಿ ಹುಟ್ಟು ಹಾಕಿದ ಆರ್.ಎನ್. ಶೆಟ್ಟಿ ಅವರು, ಹಿಡಕಲ್ ಜಲಾಶಯ, ತಟ್ಟಿಹಳ್ಳ ಜಲಾಶಯ, ಸೂಪ ಜಲಾಶಯ, ಗೇರುಸೊಪ್ಪ ಜಲಾಶಯ, ಮಾಣಿ ಅಣೆಕಟ್ಟೆ, ವಾರಾಹಿ ಜಲ ವಿದ್ಯುತ್ ಯೋಜನೆ, ಕೆ.ಎಲ್.ಇ. ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಕೊಂಕಣ ರೈಲು ಸುರಂಗ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವೇ ಮೊದಲಾದ ಹತ್ತು ಹಲವು ಮಹತ್ವದ ಜನೋಪಯೋಗಿ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಮೈಲುಗಲ್ಲಿನ ಸಾಧನೆ ಮಾಡಿದ್ದಾರೆ.
Laxmi News 24×7