ಬೆಂಗಳೂರು (ಡಿ. 12): ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂದು ಒತ್ತಾಯಿಸಿ, ಗುರುವಾರ ಪ್ರತಿಭಟನೆ ನಡೆಸಿದ್ದ ಸಾರಿಗೆ ನೌಕರರು ನಿನ್ನೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಮುಷ್ಕರದ 2ನೇ ದಿನವಾದ ಇಂದು ಕೂಡ ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ, ಈಶಾನ್ಯ ಸಾರಿಗೆ ಬಸ್ಗಳು ಸಂಚಾರ ನಡೆಸದ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಆಟೋ, ಕ್ಯಾಬ್ಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಇದೇ ಸಮಯವನ್ನು ಬಳಸಿಕೊಂಡು ಆಟೋಗಳು ಪ್ರಯಾಣಿಕರಿಂದ ಹಗಲು ದರೋಡೆ ಮಾಡುತ್ತಿವೆ. ಹೀಗಾಗಿ, ಪ್ರಯಾಣಿಕರ ಅನುಕೂಲಕ್ಕಾಗಿ ಇಂದು ಹೆಚ್ಚುವರಿ ರೈಲುಗಳನ್ನು ಓಡಿಸಲು ನಮ್ಮ ಮೆಟ್ರೋ ನಿಗಮ ನಿರ್ಧಾರ ಮಾಡಿದೆ.
