ಬೆಂಗಳೂರು- ಇಂದಿನಿಂದ ಆರಂಭವಾಗಿರುವ ಮಾಸಿಕ ಜನಸಂಪರ್ಕ ಸಭೆಗೆ ಉತ್ತಮ ಜನ ಸ್ಪಂದನೆ ದೊರೆತಿದ್ದು, ಕ್ರಿಮಿನಲ್‍ಗಳಿಗೆ ಈ ಸಭೆಯ ಮೂಲಕ ಪೊಲೀಸರು ಸ್ಪಷ್ಟ ಎಚ್ಚರಿಕೆಯ ಸಂದೇಶ ರವಾನಿಸಲು ಸಾಧ್ಯವಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಲ್‍ಪಂಥ್ ತಿಳಿಸಿದ್ದಾರೆ.
ಪೂರ್ವ ವಿಭಾಗದ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ನಡೆದ ಮಾಸಿಕ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಉತ್ತಮ ಭಾಂದವ್ಯ ಇರಬೇಕು. ಜನರಿಗೆ ತಮ್ಮ ಕೆಲಸ ಯಾವ ಹಂತದಲ್ಲಿದೆ ಎಂಬ ಮಾಹಿತಿ ಸಿಗಬೇಕು ಎಂಬ ಕಾರಣಕ್ಕೆ ಜನ ಸಂಪರ್ಕ ಸಭೆ ಆಯೋಜಿಸಲಾಗಿದೆ.
ಜನಸಂಪರ್ಕ ಸಭೆಯ ದಿನ ಠಾಣೆಯ ರೈಟರ್‍ರಿಂದ ಹಿಡಿದು ಡಿಸಿಪಿವರೆಗೆ ಎಲ್ಲಾ ಹಂತದ ಅಧಿಕಾರಿಗಳು ಠಾಣೆಯಲ್ಲಿ ಲಭ್ಯ ಇರುತ್ತಾರೆ. ಈ ಸಭೆಯ ಮೂಲಕ ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿ ಯಾವ ಅಭಿಪ್ರಾಯ ಇದೆ ಎಂದು ಗೋತ್ತಾಗಲಿದೆ ಮತ್ತು ಕೆಳ ಹಂತದ ಸಿಬ್ಬಂದಿಗಳು ಹಾಗೂ ಹಿರಿಯ ಅಧಿಕಾರಿಗಳ ನಡುವೆ ಸಮಾಲೋಚನೆಗೂ ಅವಕಾಶ ಸಿಗಲಿದೆ ಎಂದರು.
ನಗರದ ಎಲ್ಲ ಪೊಲೀಸ್ ಠಾಣೆಗಳು ಇಂದು ಮಾಸಿಕ ಜನಸಂಪರ್ಕ ಸಭೆ ನಡೆಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಯಲ್ಲದೆ ಸಂಚಾರ ಠಾಣೆ ಹಾಗೂ ಸಿಸಿಬಿ ಕಚೇರಿಯಲ್ಲೂ ಜನಸಂಪರ್ಕ ಸಭೆಗಳು ನಡೆದಿವೆ ಎಂದರು. ಪೊಲೀಸ್ ಆಯುಕ್ತರು ಪುಲಕೇಶಿನಗರ ಠಾಣೆಯ ಸಭೆಯ ಬಳಿಕ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಸಿಕ ಸಭೆಯಲ್ಲಿ ಭಾಗವಹಿಸಿದ್ದರು. ನಗರದ ಒಟ್ಟು 12 ಠಾಣೆಗಳಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.
Laxmi News 24×7