ಬೆಂಗಳೂರು,ನ.10- ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಆರ್ ಆರ್ ನಗರ ಮತ್ತು ಶಿರಾದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದರಿಂದ ಯಾವುದೇ ಸಂದರ್ಭದಲ್ಲಿ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯಾಗುವುದು ಖಚಿತವಾಗಿದೆ. ದೆಹಲಿ ವರಿಷ್ಠರು ಅನುಮತಿ ಕೊಟ್ಟರೆ ದೀಪಾವಳಿ ಹಬ್ಬದ ನಂತರ ಯಾವುದೇ ವೇಳೆಯೂ ಸಂಪುಟ ವಿಸ್ತರಣೆಗೆ ಮುಹೂರ್ತ ಯಾವುದೇ ವೇಳೆಯಲ್ಲಿ ನಿಗದಿಯಾಗಲಿದ್ದು, ಆಡಳಿತಾರೂಢ ಬಿಜೆಪಿಯಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ.
ಸದ್ಯ ಬಿಎಸ್‍ವೈ ಸಂಪುಟದಲ್ಲಿ 7 ಮಂತ್ರಿ ಸ್ಥಾನಗಳು ಖಾಲಿಯಿದ್ದು, 2 ಡಜನ್‍ಗೂ ಅಧಿಕ ಶಾಸಕರು ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇದರಲ್ಲಿ ಎಂಟಿಬಿ ನಾಗರಾಜ್, ಆರ್.ಶಂಕರ್, ಮುನಿರತ್ನ ಅವರುಗಳು ಸಂಪುಟ ಸೇರ್ಪಡೆಯಾಗುವುದು ಬಹುತೇಕ ಖಚಿತ. ಆದರೆ ಕಳೆದ ವಿಧಾನಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಹುಣಸೂರಿನಿಂದ ಸ್ಪರ್ಧಿಸಿ ಪರಾಭವಗೊಂಡು ವಿಧಾನಪರಿಷತ್‍ಗೆ ಆಯ್ಕೆಯಾಗಿರುವ ಎಚ್.ವಿಶ್ವನಾಥ್‍ಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.
ಒಂದು ವೇಳೆ ಸಿಎಂ ಯಡಿಯೂರಪ್ಪ ಪಟ್ಟು ಹಿಡಿದರೆ ಕೊನೆ ಕ್ಷಣದಲ್ಲಿ ಅವರು ಕೂಡ ಸೇರ್ಪಡೆಯಾದರೂ ಅಚ್ಚರಿ ಇಲ್ಲ. ಈ ಬಾರಿ ಸಂಪುಟ ವಿಸ್ತರಣೆಯಾಗಲಿದೆಯೋ ಅಥವಾ ಪುನಾರಚನೆಯಾಗಲಿದೆಯೋ ಎಂಬ ಜಿಜ್ಞಾಸೆಯೂ ಎದುರಾಗಿದೆ. ಏಕೆಂದರೆ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಸಚಿವರು ತಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಕಾರಣ ನಾಲ್ಕೈದು ಮಂದಿ ಸಚಿವರು ಸಂಪುಟದಿಂದ ಕೋಕ್ ಪಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಹಾಗೊಂದು ವೇಳೆ ಸಂಪುಟದಿಂದ ಕೈ ಬಿಟ್ಟರೆ ಸಿಎಂ ದೆಹಲಿಯಿಂದ ಅನುಮತಿ ಸಿಗುತ್ತಿದ್ದಂತೆ ಸಂಪುಟ ರಚನೆಗೆ ಕೈ ಹಾಕುವುದು ಖಚಿತ ಎಂಬ ಮಾತು ಬಿಜೆಪಿ ಪಾಳೆಯದಲ್ಲಿ ಕೇಳಿಬರುತ್ತಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಮುಖ್ಯಮಂತ್ರಿಯಡಿಯೂರಪ್ಪ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನೊಂದಿಗೆ ಚರ್ಚಿಸಲು ದೆಹಲಿಗೆ ಹೋಗಿದ್ದಾಗ ಚರ್ಚೆ ನಡೆಸಿ ಬಂದಿದ್ದರಷ್ಟೆ, ಅಂತಿಮ ಒಪ್ಪಿಗೆ ಸಿಕ್ಕಿರಲಿಲ್ಲ. ನಂತರ ಬಿಹಾರ ಚುನಾವಣೆ, ನಮ್ಮ ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆಗಳು ಬಂದವು. ಇದೀಗ ಸಂಪುಟ ವಿಸ್ತರಣೆ ಬಗ್ಗೆ ಏನು ತೀರ್ಮಾನ ಕೈಗೊಳ್ಳುತ್ತದೆ ಹೈಕಮಾಂಡ್ ಎಂಬುದು ಕುತೂಹಲ.
ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಯಡಿಯೂರಪ್ಪನವರ ಪ್ರಮುಖ ಆದ್ಯತೆಯಾಗಿದ್ದು, ಸಚಿವಾಕಾಂಕ್ಷಿ ಶಾಸಕರ ಲಾಬಿ ತೀವ್ರವಾಗಿದೆ. ಹೊಸದಾಗಿ ಚುನಾಯಿತರಾದ ಎಂಎಲ್ಸಿಗಳಾದ ಆರ್.ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರನ್ನು ಸಂಪುಟಕ್ಕೆ ಸೇರ್ಪಡೆಗೆ ಸಜ್ಜಾಗಿದ್ದಾರೆ.
ಸಿ.ಟಿ.ರವಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಎಂಎಲ್‍ಸಿ ಮತ್ತು ಒಕ್ಕಲಿಗ ಮುಖಂಡ ಸಿ.ಪಿ.ಯೋಗೇಶ್ವರ ಅವರು ಈಗ ಈ ಹುದ್ದೆಗೆ ಲಾಬಿ ನಡೆಸುತ್ತಿದ್ದಾರೆ. ವಿಶೇಷವೆಂದರೆ, ಇತರ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಯಾದವರು ವಿಸ್ತರಣೆಯ ಕುರಿತು ಸಿಎಂ ಗಮನ ಸೆಳೆಯಲು ಕಾಯುತ್ತಿದ್ದರೆ, ಬಸನಗೌಡ ಪಾಟೀಲ್ ಯತ್ನಾಲ್, ಅರವಿಂದ್ ಲಿಂಬಾವಳಿ, ಸುನೀಲ್ ಕುಮಾರ್, ಉಮೇಶ್ ಕಟ್ಟಿ ಸೇರಿದಂತೆ ರಾಜ್ಯ ಬಿಜೆಪಿಯ ಹಿರಿಯ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಕಾರ್ಯದರ್ಶಿ ಅರುಣ್ ಕುಮಾರ್ ಮತ್ತು ಹೈಕಮಾಂಡ್ ಅನ್ನು ನೇರವಾಗಿ ಸಂಘಟಿಸುವಂತಹ ರಾಜ್ಯ ಪಕ್ಷದ ಮುಖಂಡರೊಂದಿಗೆ ಲಾಬಿ ಮಾಡಲು ಯತ್ನಿಸುತ್ತಿದ್ದಾರೆ. ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಶಶಿಕಲಾ ಜೊಲ್ಲೆ ಅವರ ಬದಲಿಗೆ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಹೈಕಮಾಂಡ್ ಬಿಎಸ್‍ವೈಗೆ ದೆಹಲಿಗೆ ಬಾರದೆ ನೀವೆ ಸ್ವತಂತ್ರ ನಿರ್ಧಾರ ಕೈಗೊಳ್ಳಿ ಎಂದರೆ ದೀಪಾವಳಿ ಹಬ್ಬದ ವೇಳೆಗೆ ಸಚಿವ ಸಂಪುಟ ಪುನಾರಚನೆಯಾಗಿ ಸಚಿವಾಕಾಂಕ್ಷಿಗಳಿಗೆ ಹಬ್ಬದ ಸಿಹಿ ಸಿಗಲಿದೆ.