ಬೆಂಗಳೂರು,ನ.2- ಈ ಬಾರಿ ಮುಂಗಾರು ಬೆಳೆ ವಾಡಿಕೆಗಿಂತ ಹೆಚ್ಚಾದ ಪರಿಣಾಮ ರಾಜ್ಯದ ಬಹುತೇಕ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದಲ್ಲದೆ ನೆರೆಯ ರಾಜ್ಯಗಳಿಗೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ನೀರಿನ ಹರಿಸಲಾಗಿದೆ. ಕೃಷ್ಣ ಕೊಳ್ಳದ ಜಲಾಶಯಗಳು ಭರ್ತಿ ಯಾಗಿದ್ದು, ನೆರೆಯ ಆಂಧ್ರಪ್ರದೇಶಕ್ಕೆ ಬಿಡಬೇಕಾದ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನು ಬಿಡಲಾಗಿದೆ. ಅದೇ ರೀತಿ ಕಾವೇರಿ ಕೊಳ್ಳದಿಂದಲೂ ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನೇ ಬಿಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಾವೇರಿ ಜಲಾನಯನ ಭಾಗದಿಂದ ತಮಿಳು ನಾಡಿಗೆ ಅಕ್ಟೋಬರ್ ಅಂತ್ಯದ ವೇಳೆಗೆ ಸುಮಾರು 155 ಟಿಎಂಸಿ ಅಡಿಗೂ ಹೆಚ್ಚು ನೀರನ್ನು ಬಿಡಲಾಗಿದೆ. ಜೂನ್ 1ರಿಂದ ಅಕ್ಟೋಬರ್ ಅಂತ್ಯದವರೆಗಿನ ಅವಧಿಯಲ್ಲಿ ರಾಜ್ಯದಿಂದ ತಮಿಳುನಾಡಿಗೆ 146 ಟಿಎಂಸಿ ಅಡಿಯಷ್ಟು ನೀರನ್ನು ಬಿಡಬೇಕಾಗಿತ್ತು. ಆದರೆ ಸರ್ಕಾರದ ಉನ್ನತ ಮೂಲಗಳ ಪ್ರಕಾರ 155 ಟಿಎಂಸಿಗೂ ಅಧಿಕ ಪ್ರಮಾಣದ ನೀರು ರಾಜ್ಯದಿಂದ ತಮಿಳುನಾಡಿಗೆ ಹರಿದು ಹೋಗಿದೆ.
ಜಲವರ್ಷದಲ್ಲಿ (ಜೂನ್-ಮೇವರೆಗೆ) ರಾಜ್ಯದಿಂದ ತಮಿಳುನಾಡಿಗೆ 177 ಟಿಎಂಸಿಯಷ್ಟು ನೀರು ಬಿಡಬೇಕಾಗಿದೆ. ಆದರೆ ಈಗಾಗಲೇ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ನೀರು ಹರಿದುಹೋಗಿದೆ. ಅಲ್ಲದೆ ಕಾವೇರಿ ಕೊಳ್ಳದ ಕೆಆರ್‍ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳು ಕೂಡ ಭರ್ತಿಯಾಗಿವೆ. ಇದರಿಂದ ಉಭಯ ರಾಜ್ಯಗಳ ನಡುವಿನ ಜಲ ಸಂÀಘರ್ಷಕ್ಕೆ ಅವಕಾಶ ಇಲ್ಲದಂತಾಗಿದೆ. ಪ್ರಕೃತಿಯೇ ಉಭಯ ರಾಜ್ಯಗಳ ನಡುವಿನ ಬಿಕ್ಕಟ್ಟನ್ನು ಪರಿಹರಿಸಿದಂತಾಗಿದೆ.
ಅಕ್ಟೋಬರ್ ತಿಂಗಳಿನಲ್ಲಿ ಬಿದ್ದ ಮಳೆಯಿಂದಾಗಿ ಜಲಾಶಯಗಳ ಒಳಹರಿವು ನಿರಂತರವಾಗಿ ಮುಂದುವರೆದಿದ್ದು, ಸರಿಸುಮಾರು ನಿತ್ಯ ಒಂದು ಟಿಎಂಸಿ ಅಡಿಯಷ್ಟು ನೀರು ತಮಿಳುನಾಡಿಗೆ ಹೋಗುತ್ತಿದೆ. ನವೆಂಬರ್ ಅಂತ್ಯದ ವೇಳೆಗೆ ವಾರ್ಷಿಕವಾಗಿ ಬಿಡಬೇಕಾಗಿದ್ದ ಗರಿಷ್ಠ ಪ್ರಮಾಣದ ನೀರು ತಮಿಳುನಾಡಿಗೆ ಹರಿದುಹೋಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೃಷ್ಣ ಕೊಳ್ಳದ ಆಲಮಟ್ಟಿ, ನಾರಾಯಣಪುರ, ತುಂಗಭದ್ರಾಜಲಾಯಶಗಳು ಸೇರಿದಂತೆ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಅಲ್ಲದೆ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಜಲಾಶಯಗಳಿಂದ ಈ ವರ್ಷವೂ ಭಾರೀ ಪ್ರಮಾಣದ ನೀರನ್ನು ಹೊರ ಬಿಡಲಾಗಿದೆ.
ಕಳೆದ ವರ್ಷದಂತೆ ಈ ವರ್ಷವೂ ಕೂಡ ಕೃಷ್ಣ ಮತ್ತು ಕಾವೇರಿ ಕೊಳ್ಳದ ಜಲಾಶಯಗಳು ಭರ್ತಿಯಾಗಿದ್ದು, ನೆರೆಯ ರಾಜ್ಯಗಳಿಗೂ ಬಿಡಬೇಕಿದ್ದ ಪ್ರಮಾಣಕ್ಕಿಂತ ಹೆಚ್ಚಿನ ನೀರು ಬಿಟ್ಟಿರುವುದರಿಂದ ನೆರೆಯ ರಾಜ್ಯಗಳೊಂದಿಗಿನ ಜಲಸಂಘರ್ಷಕ್ಕೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ. ಆದರೆ ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ಸೂಪ, ವರಾಹಿ ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ.ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ.
Laxmi News 24×7