ಮೈಸೂರು: ಚಾಮುಂಡೇಶ್ವರಿ ರಥೋತ್ಸವಕ್ಕೂ ಕೋವಿಡ್ ಕರಿನೆರಳು ಬಿದ್ದಿದೆ. ದೊಡ್ಡ ರಥದ ಬದಲು ಚಿಕ್ಕ ತೇರಿನಲ್ಲಿ ಮೆರವಣಿಗೆ ಸಾಗಿದೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‍ರಿಂದ ರಥ ಎಳೆದು ಚಾಲನೆ ನೀಡಿದ್ದು, ಚಾಮುಂಡೇಶ್ವರಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗಿದೆ.
ದಸರಾ ಮುಗಿದ ಬಳಿಕ ಮಹಾರಾಜರು ಜಾತ್ರೆ ಆಯೋಜನೆ ಮೂಲಕ ಭಕ್ತರಿಗೆ ಚಾಮುಂಡಿ ದರ್ಶನದ ವ್ಯವಸ್ಥೆ ಮಾಡಿದ್ದರು. ಇತಿಹಾಸದಲ್ಲೇ ಮೊದಲ ಬಾರಿಗೆ ಜನರಿಲ್ಲದ ಜಾತ್ರೆ ಇದಾಗಿದೆ. ರಥೋತ್ಸವದ ಸಂಭ್ರಮ, ಸಡಗರವನ್ನು ಮಹಾಮಾರಿ ಕಸಿದುಕೊಂಡಿದೆ. ದೊಡ್ಡ ರಥ ಶೆಡ್‍ನಲ್ಲೇ ಉಳಿದಿದ್ದು, ಚಿಕ್ಕ ತೇರಿಗೆ ಸಿಂಪಲ್ ಹೂವಿನ ಅಲಂಕಾರ ಮಾಡಲಾಗಿದೆ.
ಇದೇ ವೇಳೆ ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯದುವೀರ್, ಜಗತ್ತಿಗೆ ಕಾಡುತ್ತಿರುವ ಕೊರೊನಾ ನಿವಾರಣೆ ಆಗಲಿ. ನಾಡಿಗೆ ಹಾಗೂ ಜನತೆಗೆ ಶುಭವಾಗಲಿ ಎಂದು ಪ್ರಾರ್ಥನೆ ಮಾಡಿದ್ದೇವೆ. ದಸರಾ ನಂತರ ಚಾಮುಂಡಿ ರಥೋತ್ಸವ ಮಾಡಿದ್ದೇವೆ. ಅರಮನೆ ಸಂಪ್ರದಾಯದಂತೆ ರಥೋತ್ಸವ ನೆರವೇರಿದೆ. ಈ ಕಷ್ಟದ ಸಮಯದಲ್ಲಿ ರಥೋತ್ಸವವನ್ನು ಸರಳವಾಗಿ ಮಾಡಿದ್ದೇವೆ ಎಂದರು.

ಪ್ರಧಾನ ಅರ್ಚಕ ಡಾ.ಶಶಿಶೇಖರ್ ದಿಕ್ಷೀತ್ ಮಾತನಾಡಿ, ಸಾಂಪ್ರದಾಯಿಕವಾಗಿ ಚಾಮುಂಡೇಶ್ವರಿ ರಥೋತ್ಸವ ನೆರವೇರಿದೆ. ಸಾಂಪ್ರದಾಯಕ್ಕೆ ಧಕ್ಕೆ ಬಾರದಂತೆ ರಥೋತ್ಸವ ನಡೆಸಿದ್ದೇವೆ. ಈ ಬಾರಿ ತೆಪ್ಪೋತ್ಸವ ಇರೋದಿಲ್ಲ. ರಾಜ್ಯದ ಎಲ್ಲಿಯೂ ರಥೋತ್ಸವ ನಡೆದಿಲ್ಲ. ನಮ್ಮಲ್ಲಿ ಸರಳವಾಗಿ ರಥೋತ್ಸವ ನಡೆಯಲು ಅವಕಾಶ ನೀಡಲಾಗಿದೆ. ಜಿಲ್ಲಾಡಳಿತ ಸಹಕಾರಕ್ಕೆ ನಾವು ಧನ್ಯವಾದ ಹೇಳುತ್ತೇವೆ. ಈ ಬಾರಿ ತೆಪ್ಪೋತ್ಸವ ಇರೋದಿಲ್ಲ. ಹೀಗಾಗಿ ಭಕ್ತರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
Laxmi News 24×7