ಬೆಳಗಾವಿ: ಹುಕ್ಕೇರಿ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ ಅವರ ಅಳಿಯನ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದು ಮಂಗಳವಾರ ರಾತ್ರಿ ಗಲಾಟೆ ನಡೆದ್ದು, ಸದ್ಯ ಪ್ರಕರಣ ಸಂಬಂಧ ದೂರು ಪ್ರತಿ ದೂರು ದಾಖಲಾಗಿದೆ. ಸಿಪಿಐ ಗುರುರಾಜ್ ವ್ಯಕ್ತಿಯೊಬ್ಬರಿಗೆ ರಿವಾಲ್ವಾನ್ ತೋರಿಸಿ ಬೆದರಿಕೆ ಹಾಕಿರುವ ಆರೋಪವೂ ಕೇಳಿ ಬಂದಿದೆ.
ಘಟನೆ ಹಿನ್ನೆಲೆ?
ಮಂಗಳವಾರ ರಾತ್ರಿ ಹುಕ್ಕೇರಿ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ ತಮ್ಮ ಮಗನ ಜನುಮ ದಿನದ ಹಿನ್ನೆಲೆಯಲ್ಲಿ ಕುಟುಂಬಸ್ಥರೊಂದಿಗೆ ಜಾಂಬೋಟಿ ಬಳಿ ರೆಸಾರ್ಟ್ ಗೆ ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಮರಳಿ ಬರುವಾಗ ನಾವಗೆ ಗ್ರಾಮದ ಬಳಿ ಕಲ್ಯಾಣಶೆಟ್ಟಿ ಅವರ ಅಳಿಯನ ಕಾರಿಗೆ ಶಾಹಾಪೂರ ಮೂಲದ ಸುನೀಲ್ ಕರುಣಕರ್, ರೂಪೇಶ್ ಪಾಟೀಲ್ ಎಂಬುವವರ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತ ಸಂಭವಿಸಿದ ಬಳಿಕ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಇತ್ತ ಕಲ್ಯಾಣಶೆಟ್ಟಿ ಅಳಿಯ ಫೋನ್ ಮಾಡಿ ಗಲಾಟೆಯಾಗಿದೆ ಅಂತಾ ಸಿಪಿಐ ಕಲ್ಯಾಣಶೆಟ್ಟಿ ಅವರನ್ನ ವಾಪಸ್ ಕರೆಸಿಕೊಂಡಿದ್ದಾನೆ. ಸ್ಥಳಕ್ಕೆ ಬಂದ ಸಿಪಿಐ ಕಲ್ಯಾಣಶೆಟ್ಟಿ ಸುನೀಲ್ ಮತ್ತು ರೂಪೇಶ್ ಅವರಿಗೆ ಸರ್ಕಾರಿ ರಿವಾಲ್ವಾರ್ ತೋರಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ.
ರಿವಾಲ್ವಾರ್ ತೋರಿಸಿ ಬೆದರಿಕೆ ಹಾಕಿದ್ದಾರೆ. ನಮ್ಮ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ ಅಂತಾ ಸುನೀಲ್ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಮ್ಮ ಕುಟುಂಬಸ್ಥರ ಮೇಲೂ ಹಲ್ಲೆ ಮಾಡಿದ್ದಾರೆ. ಕಾರು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿ ಕಲ್ಯಾಣಶೆಟ್ಟಿ ಅಳಿಯನೂ ಸುನೀಲ್ ಮತ್ತವರ ಸಂಘಡಿಗರ ವಿರುದ್ದ ದೂರು ದಾಖಲಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು- ಪ್ರತಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.