ರಾಯಚೂರು: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನರಾದ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅಂತ್ಯಸಂಸ್ಕಾರವನ್ನ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ರಾಯಚೂರಿನ ಪೋತಗಲ್ ಬಳಿ ನಿಗದಿತ ಸ್ಥಳದಲ್ಲಿ ಕೋವಿಡ್ ನಿಯಮಾವಳಿ ಜೊತೆಗೆ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲಾಗಿದೆ. ಅಂತಿಮ ಸಂಸ್ಕಾರವನ್ನ ಅಶೋಕ್ ಗಸ್ತಿಯವರ ಪುತ್ರಿ ನೇಹಾ ಗಸ್ತಿ ನೆರವೇರಿಸಿದರು. ಅಂತ್ಯಕ್ರಿಯೆಯಲ್ಲಿ ಶಾಸಕ ಶಿವರಾಜ್ ಪಾಟೀಲ್, ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಸೇರಿದಂತೆ ಸುಮಾರು 30 ಜನ ಭಾಗವಹಿಸಿದ್ದರು.
ಅಗಲಿದ ನಾಯಕನಿಗೆ ಜಿಲ್ಲೆಯಾದ್ಯಂತ ಅಭಿಮಾನಿಗಳು, ಬಿಜೆಪಿ ಪಕ್ಷದ ಕಾರ್ಯಕರ್ತರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ವಿವಿಧ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ. ಕೋವಿಡ್ 19 ಸೋಂಕಿಗೆ ತುತ್ತಾಗಿದ್ದ ಗಸ್ತಿ ಅವರಿಗೆ ಕಳೆದ 15 ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ 10.31ರ ವೇಳೆಗೆ ಮೃತಪಟ್ಟಿದ್ದರು.
ಬಡತನದಲ್ಲಿ ಬೆಳೆದ ಅಶೋಕ್ ಗಸ್ತಿ ಈಗಲೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಎಬಿವಿಪಿಯಿಂದ ಶುರುವಾಗಿ ಆರ್‌ಎಸ್‌ಎಸ್ ಗುರುತಿಸಿಕೊಂಡಿದ್ದ ಗಸ್ತಿ ಈಗ ರಾಯಚೂರು ಬಳ್ಳಾರಿ ಕೊಪ್ಪಳ ಪ್ರಭಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಎರಡು ರಾಯಚೂರು ನಗರ ಕ್ಷೇತ್ರದ ಟಿಕೆಟ್ ಗೆ ಯತ್ನಿಸಿದ್ದರೂ ಸಿಕ್ಕಿರಲಿಲ್ಲ. ಬಿಜೆಪಿ ಹೈಕಮಾಂಡ್ ಅಶೋಕ್ ಗಸ್ತಿಯವರಿಗೆ ರಾಜ್ಯಸಭಾ ಟಿಕೆಟ್ ನೀಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಜುಲೈ 22 ರಂದು ಅಶೋಕ್ ಗಸ್ತಿ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.