ಹುಬ್ಬಳ್ಳಿ :ಶವ ಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ತೆರಳಲು ದಾರಿ ಇಲ್ಲದೇ ತೊಂದರೆ ಅನುಭವಿಸುತ್ತಿರುವ ತಾಲೂಕಿನ ಸೊಟಕನಾಳ ಗ್ರಾಮಸ್ಥರು ಸೂಕ್ತ ದಾರಿ ಕಲ್ಪಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಸೊಟಕನಾಳ ಗ್ರಾಮದ ಮುಖಂಡ ಚನ್ನಪ್ಪ ಹಾಲವಾರ ಮಾತನಾಡಿ, ಸೊಟಕನಾಳದಲ್ಲಿ 1997ರಲ್ಲಿ ಅಂದಿನ ತಹಸೀಲ್ದಾರ್ರು ರಿಸನಂ 2ರಲ್ಲಿ 20 ಗುಂಟೆ ಜಾಗವನ್ನು ಸ್ಮಶಾನಕ್ಕೆ ನೀಡಿದ್ದರು. ಆದರೆ, ಸ್ಮಶಾನಕ್ಕೆ ತೆರಳಲು ಜಾಗ ಇಲ್ಲದ್ದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತ ಬಂದಿದ್ದಾರೆ.
ಕಳೆದ 23 ವರ್ಷಗಳಿಂದ ಗ್ರಾಮಸ್ಥರು ಸ್ಮಶಾನಕ್ಕಾಗಿ ದಾರಿ ಕಲ್ಪಿಸುವಂತೆ ಆಗ್ರಹಿಸಿ ಸಂಬಂಧಿಸಿದ ಮೇಲಧಿಕಾರಿಗಳಿಗೆ ಮೌಖಿಕ ಮತ್ತು ಲಿಖಿತವಾಗಿ ಮನವಿಯನ್ನೂ ಸಲ್ಲಿಸಿ ರೋಸಿ ಹೋಗಿದ್ದಾರೆ.
ಈ ಕುರಿತಂತೆ ಜನಪ್ರತಿನಿಧಿಗಳ ಗಮನಕ್ಕೂ ತಂದರೂ ಈವರೆಗೆ ಯಾವುದೆ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.