ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ್ತೊಂದು ಗರಿಯನ್ನು ಮುಡಿಗೇರಿಸಿಕೊಂಡಿದೆ. ಸ್ವಚ್ಛ ಭಾರತ ಸಮೀಕ್ಷೆಯಲ್ಲಿ ಮೂರನೇ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಕೇಂದ್ರ ಸರ್ಕಾರ ನಡೆಸುವ ಸ್ವಚ್ಛ ಭಾರತ ಸರ್ವೇಕ್ಷಣೆಯಲ್ಲಿ (ಸಮೀಕ್ಷೆಯಲ್ಲಿ) ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮೂರನೇ ಸ್ಥಾನ ಬಂದಿದೆ. ಗಣೇಶ ಚತುರ್ಥಿಯ ಮೊದಲ ದಿನ ಕೇಂದ್ರ ಸರ್ಕಾರ ಪ್ರಕಟಿಸಿರುವ ಸ್ವಚ್ಛತಾ ವರದಿಯಲ್ಲಿ ಮೈಸೂರಿಗೆ ಮೊದಲ ಸ್ಥಾನ, ತುಮಕೂರಿಗೆ ಎರಡನೇ ಸ್ಥಾನ ಬಂದಿದೆ. ಇನ್ನೂ ರಾಜ್ಯದ ಐದು ಸ್ವಚ್ಛ ನಗರಗಳ ಸಾಲಿನಲ್ಲಿ ಹು-ಧಾ ಮಹಾನಗರ ಮೂರನೇ ಸ್ಥಾನ ಪಡೆದುಕೊಂಡಿರುವುದು ವಿಶೇಷವಾಗಿದೆ.
ದೇಶದ ರ‍್ಯಾಕಿಂಗ್‍ನಲ್ಲಿ 172ನೇ ಸ್ಥಾನದಲ್ಲಿದೆ. ಚುನಾಯಿತ ಪ್ರತಿನಿಧಿಗಳ ಕೌನ್ಸಿಲ್ ಇಲ್ಲದೇ ಒಂದೂವರೆ ವರ್ಷಗಳಾಗಿದ್ದು, ಆಡಳಿತ ಮಂಡಳಿಯ ದೃಷ್ಟಿ ಕೊರೊನಾ ನಿಯಂತ್ರಣದತ್ತ ನೆಟ್ಟಿದೆ. ಇದರ ಮಧ್ಯೆ ಹು-ಧಾ ಮಹಾನಗರ ಪಾಲಿಕೆ ರಾಜ್ಯದಲ್ಲಿ ಮೂರನೇ ರ‍್ಯಾಂಕ್ ಪಡೆದಿರುವುದು ನಿಜಕ್ಕೂ ವಿಶೇಷವಾಗಿದೆ. ಅಲ್ಲದೇ ಹು-ಧಾ ಮಹಾನಗರದ ಸ್ವಚ್ಛತಗೆ ಪಾಲಿಕೆ ಕೈಗೊಂಡಿರುವ ಸ್ವಚ್ಛತಾ ಕಾರ್ಯಗಳು ಪಾಲಿಕೆಗೆ ಗೌರವದ ಗರಿ ಮುಡಿಗೇರಿಸಿಕೊಳ್ಳಲು ಸೂಕ್ತ ನಿದರ್ಶನವಾಗಿದೆ.
ಸ್ಮಾರ್ಟ್ ಸಿಟಿ ಕಾಮಗಾರಿ ಜೊತೆ ಜೊತೆಗೆ ಸ್ವಚ್ಛ ಭಾರತದ ಯೋಜನೆಗಳಲ್ಲಿ ಸೂಕ್ತ ನಿರ್ಧಾರವನ್ನು ಪಾಲಿಕೆ ತೆಗೆದುಕೊಳ್ಳುವ ಮೂಲಕ ಒಳ್ಳೆಯ ಫಲಿತಾಂಶವನ್ನು ಪಾಲಿಕೆ ಪಡೆದುಕೊಂಡಿದೆ. ಅಲ್ಲದೇ ಮನೆ ಮನೆಗೆ ಕಸ ಸಂಗ್ರಹ, ತ್ಯಾಜ್ಯ ವಿಲೇವಾರಿ, ಜನರಲ್ಲಿ ಮೂಡಿದ ಅರಿವು, ಸ್ವಚ್ಛತಾ ಸಾಮಗ್ರಿ ಹಾಗೂ ಯಂತ್ರೋಪಕರಣಗಳು ಸಮರ್ಪಕ ಬಳಕೆಯಿಂದ ಹು-ಧಾ ಮಹಾನಗರ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಪೌರಕಾರ್ಮಿಕರ ಕಾರ್ಯವನ್ನು ಇಲ್ಲಿ ಸ್ಮರಿಸಬಹುದಾಗಿದೆ.