Breaking News
Home / new delhi / ತಾಳ್ಮೆ ಪರೀಕ್ಷಿಸದೇ ಮೊದಲು ಆಸ್ಪತ್ರೆ ನಿರ್ಮಿಸಿ ಕೊಡಿ: ಇದು ಬ್ಯಾನರ್ ಚಳವಳಿ! ಎಲ್ಲಿ?

ತಾಳ್ಮೆ ಪರೀಕ್ಷಿಸದೇ ಮೊದಲು ಆಸ್ಪತ್ರೆ ನಿರ್ಮಿಸಿ ಕೊಡಿ: ಇದು ಬ್ಯಾನರ್ ಚಳವಳಿ! ಎಲ್ಲಿ?

Spread the love

ಚಿಕ್ಕಮಗಳೂರು: ‘ಶೃಂಗೇರಿಯ ನೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಉತ್ತಮ ಆಸ್ಪತ್ರೆಗಳಿಲ್ಲ, ನಿಮ್ಮ ಹಾಗೂ ಊರಿನ ಜನರ ಆರೋಗ್ಯದ ಹಿತದೃಷ್ಠಿಯಿಂದ ವಾಹನಗಳನ್ನ ನಿಧಾನವಾಗಿ ಚಲಿಸಿ” ಎಂಬ ಬ್ಯಾನರ್ ಶೃಂಗೇರಿಯ ಎಲ್ಲೆಡೆ ಕಂಡುಬರುತ್ತದೆ.

ಪ್ರವಾಸಿಗರು ಕೂಡ ಆತಂಕದಿಂದ ನೋಡುತ್ತಿದ್ದಾರೆ!
ವ್ಯವಸ್ಥೆ ಅಲ್ಲಲ್ಲ. ಅವ್ಯವಸ್ಥೆಯ ಅಣಕವನ್ನ ಇದೀಗ ಜನರೇ ತೆರೆದಿಡುತ್ತಿದ್ದಾರೆ. ಈ ರೀತಿಯ ಬ್ಯಾನರ್​ಗಳು ಶೃಂಗೇರಿಯ ಹಲವೆಡೆ ಕಂಡು ಬರುತ್ತಿವೆ. ಈ ವಿಭಿನ್ನ ಬ್ಯಾನರ್ ಕಂಡು ಸ್ಥಳೀಯರ ಜೊತೆ ಜಿಲ್ಲೆಗೆ ಬರೋ ಪ್ರವಾಸಿಗರು ಕೂಡ ಆತಂಕದಿಂದ ನೋಡುತ್ತಿದ್ದಾರೆ! ಕಳೆದೊಂದು ವಾರದಿಂದ ಶೃಂಗೇರಿ ಜನ ಬ್ಯಾನರ್ ಅಂದ್ರೆ ಬೆಚ್ಚಿ ಬೀಳ್ತಿದ್ದಾರೆ. ಶಂಕರಾಚಾರ್ಯರ ಪುತ್ಥಳಿ ಮೇಲೆ ಈದ್‍ ಮಿಲಾದ್ ಹಬ್ಬದಲ್ಲಿ ಶುಭ ಕೋರುವ ಬ್ಯಾನರ್ ಹಾಕಿದ್ದರಿಂದ ಶೃಂಗೇರಿಯಲ್ಲಿ ವಾದ-ವಿವಾದ ಪ್ರತಿಭಟನೆಗಳೇ ನಡೆದಿದ್ದವು.

ಅವ್ಯವಸ್ಥೆ ಖಂಡಿಸಿ ಬ್ಯಾನರ್ ಅಳವಡಿಕೆ:
 ನೋಡ-ನೋಡುತ್ತಿದ್ದಂತೆ ಶೃಂಗೇರಿ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಇದೀಗ, ಮತ್ತೆ ಬ್ಯಾನರ್ ಸುದ್ದಿ ಶಾರದಾಂಬೆ ಮಡಿಲಲ್ಲಿ ಸದ್ದು ಮಾಡುತ್ತಿದೆ. ಆದರೆ ಇದು ಯಾವುದೇ ವಾದ-ವಿವಾದಕ್ಕೆ ಆಸ್ಪದ ಕೊಡುವ ಬ್ಯಾನರ್ ಬಡಿದಾಟ ಅಲ್ಲ. ಬದಲಾಗಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧದ ಬ್ಯಾನರ್.

ಶೃಂಗೇರಿ ಪ್ರಸಿದ್ಧ, ಪುಣ್ಯ ಹಾಗೂ ಪ್ರವಾಸಿ ತಾಣ. ನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಬಂದು ಹೋಗುತ್ತಾರೆ. ಆದರೆ, ಇಂತಹ ಪ್ರವಾಸಿ ತಾಣದಲ್ಲಿ ಬಡಜನರ ಗೋಳನ್ನ ಕೇಳುವವರಿಲ್ಲದಂತಾಗಿದೆ.

ಸುಮಾರು 40-50 ಸಾವಿರಕ್ಕೂ ಅಧಿಕ ಜನಸಂಖ್ಯೆಯುಳ್ಳ ಶೃಂಗೇರಿಯಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲ. ಸಣ್ಣ-ಪುಟ್ಟ ಜ್ವರ, ಶೀತದಂತಹ ಕಾಯಿಲೆ ಹೊರತುಪಡಿಸಿ ಇನ್ಯಾವುದೇ ಕಾಯಿಲೆ ಇದ್ದರೂ ವೈದ್ಯರ ಬಾಯಲ್ಲಿ ಬರೋದು ಒಂದೇ ಮಾತು. ಅದು ಇಲ್ಲಿ ಆಗಲ್ಲ. ಮಣಿಪಾಲ್‍ಗೆ ಹೋಗಿ ಅನ್ನೋದು.

ಇದರಿಂದ ಸ್ಥಳೀಯರು ರೋಸಿಹೋಗಿದ್ದು, ಯಾವ ಪುರುಷಾರ್ಥಕ್ಕೆ ಇಂತಹ ಆಸ್ಪತ್ರೆ ಅಂತ ಹಿಡಿಶಾಪ ಹಾಕುತ್ತಿದ್ದಾರೆ. ಯಾಕಂದ್ರೆ, ಈಗಿರುವ ಆಸ್ಪತ್ರೆಯಲ್ಲಿ ಯಾವುದೇ ಸುಸಜ್ಜಿತ ವ್ಯವಸ್ಥೆಯಾಗಲಿ, ಸೌಲಭ್ಯವಾಗಲಿ ಇಲ್ಲ. ಮಣಿಪಾಲ್ ಆಸ್ಪತ್ರೆ ಅಥವಾ ಉಡುಪಿಗೆ ಶೃಂಗೇರಿಯಿಂದ ಸುಮಾರು 100 ಕಿ.ಮೀ. ಇದೆ. ಅದು ಕೂಡ ಘಾಟಿಯ ರಸ್ತೆ. ತುರ್ತು ಸಂದರ್ಭದಲ್ಲಿ ಅಲ್ಲಿಗೆ ಹೋಗಲು ಎರಡರಿಂದ ಮೂರು ಗಂಟೆ ಬೇಕು. ಅಷ್ಟು ದೂರ ಹೋಗುವಾಗ ಮಾರ್ಗ ಮಧ್ಯೆ ಏನು ಬೇಕಾದ್ರು ಸಂಭವಿಸಬಹುದು. ಈಗಾಗಲೇ ಮಾರ್ಗ ಮಧ್ಯೆ ಕೊನೆಯುಸಿರೆಳೆದಿರೋರು ಹಲವರಿದ್ದಾರೆ.

ಸುಸರ್ಜಿತ ಆಸ್ಪತ್ರೆಗಾಗಿ ಬ್ಯಾನರ್ ಟ್ರೋಲ್:
ಈ ಮಧ್ಯೆಯೂ ಧೈರ್ಯ ಮಾಡಿ ಜೀವ ಉಳಿಸಿಕೊಳ್ಳಲೇ ಬೇಕು ಅಂತ ಹೋದವರು ಅಲ್ಲಿನ ಬಿಲ್ ನೋಡಿ ಜೀವ ಉಳಿದರೂ ಜೀವನವೇ ಹೋದಂತಾಗಿದೆ. ಸಾಲ ತೀರಿಸಲು ದುಡಿಯುತ್ತಲೇ ಇದ್ದಾರೆ. ಹಾಗಾಗಿ, ಶೃಂಗೇರಿಯ ತಾಲೂಕಿನ ಹಲವೆಡೆ ಜನರು ಈ ರೀತಿಯ ಬ್ಯಾನರ್ ಬರೆಸಿ ಹಾಕಿದ್ದಾರೆ.

ಕೆಲಸ ಮಾಡದ ಜನಪ್ರತಿನಿಧಿಗಳನ್ನು, ಸರ್ಕಾರವನ್ನ ಹೀಗೂ ಟ್ರೋಲ್ ಮಾಡಬಹುದು ಅನ್ನೋದನ್ನ ಶೃಂಗೇರಿ ಜನತೆ ತೋರಿಸಿಕೊಟ್ಟಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡದೇ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರನ್ನು ಮುಗಿಸುತ್ತಾರೆ: ಸಚಿವ ಜಮೀರ್ ಅಹ್ಮದ್‌

Spread the loveಇದು ದೇಶ ಬಚಾವ್ ಎಲೆಕ್ಷನ್. ಬಿಜೆಪಿ ಒಳಗೆ ಒಂದು ರೋಗ ಇದೆ, ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ