ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿ, ಎಸ್‍ಡಿಪಿಐ ಕಾರ್ಯಕರ್ತ ಖಾಲಿದ್‍ನನ್ನು ಪೊಲೀಸರು ಬಂಧಿಸಿದ್ದಾರೆ.ಡಿಜೆ ಹಳ್ಳಿಯ ರೋಷನ್ ನಗರ ನಿವಾಸಿಯಾಗಿದ್ದ ಖಾಲಿದ್ ಇತರೇ ಆರೋಪಿಗಳಾಗಿದ್ದ ಮುಜಾಮಿಲ್, ಅಯಾಜ್, ಆಫ್ನಾನ್ ಜೊತೆಗೂಡಿ ಕೃತ್ಯದಲ್ಲಿ ಭಾಗಿಯಾಗಿದ್ದ. ಖಾಲಿದ್ ಎಸ್‍ಡಿಪಿಐ ಕಾರ್ಯಕರ್ತರನ್ನು ಒಗ್ಗೂಡಿಸಿ ಗಲಭೆ ಮಾಡಿಸಿದ್ದ ಎಂಬ ಮಾಹಿತಿ ಲಭಿಸಿದೆ. ತಡರಾತ್ರಿ ಪೊಲೀಸರು ಆರೋಪಿ ಖಾಲಿದ್‍ನನ್ನು ವಶಕ್ಕೆ ಪಡೆದು ಕರೆತಂದು ವಿಚಾರಣೆ ನಡೆಸಿದ್ದಾರೆ.
ಖಾಲಿದ್ ಜೊತೆ ಹಲವು ಪ್ರಮುಖ ರಾಜಕೀಯ ನಾಯಕರು ಸಂಪರ್ಕದಲ್ಲಿರುವ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ಡಿಜೆ ಹಳ್ಳಿ ಪೊಲೀಸರು ಖಾಲಿದ್‍ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಜೆಡಿಎಸ್‍ನಲ್ಲಿ ಗುರುತಿಸಿಕೊಂಡಿದ್ದ ವಾಜಿದ್ ನೊಂದಿಗೆ ಖಾಲಿದ್ ಗುರುತಿಸಿಕೊಂಡಿದ್ದ. ಸದ್ಯ ಖಾಲಿದ್ ಮೊಬೈಲ್ ಫೋನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ವೇಳೆ ಗಲಭೆಗೆ ಪ್ರಚೋಧನೆಗೆ ನೀಡಿದ್ದ ಬಗ್ಗೆ ಕೆಲ ಸಾಕ್ಷಿಗಳು ಲಭ್ಯವಾಗಿದೆ ಎನ್ನಲಾಗಿದೆ. ಗಲಭೆ ಸಂದರ್ಭದಲ್ಲಿ ಆರೋಪಿ ವಾಜಿದ್, ಖಾಲಿದ್ ಸಹಕಾರದೊಂದಿಗೆ ಮತ್ತಷ್ಟು ಜನರನ್ನು ಪೊಲೀಸ್ ಠಾಣೆ ಬಳಿ ಸೇರಿಸಿದ್ದ ಎನ್ನಲಾಗಿದೆ.