ಬಾಗಲಕೋಟೆ/ಬೆಳಗಾವಿ: ಮಲಪ್ರಭಾ ನದಿಗೆ 25 ಸಾವಿರ ಕ್ಯೂಸೆಕ್ ನೀರು ಬಿಡುತ್ತಿರುವ ಹಿನ್ನೆಲೆ ನದಿ ತೀರ 34 ಹಳ್ಳಿಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಇನ್ನೊಂದೆಡೆ ಕೃಷ್ಣಾ ನದಿಯ ನೀರಿನ ಮಟ್ಟ 4 ಅಡಿಗಳಷ್ಟುಇ ಹೆಚ್ಚಾಗಿದ್ದು, ರಾಜ್ಯ ಹೆದ್ದಾರಿಯ ಕುಡಚಿ-ಉಗಾರ ಮಧ್ಯದ ಸೇತುವೆ ಮುಳುಗಡೆಯಾಗಿದೆ. ಭಾರೀ ಮಲೆ ಸುರಿಯುತ್ತಿರುವ ಹಿನ್ನೆಲೆ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಲೇ ಇದೆ. ಹೀಗಾಗಿ ನದಿ ಪಾತ್ರದ ಜನತೆ ತೀವ್ರ ಆತಂಕಗೊಂಡಿದ್ದಾರೆ.
ಮಲಪ್ರಭಾ ನದಿಗೆ 25 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿ ತೀರದ 34 ಹಳ್ಳಿಗಳಲ್ಲಿ ಪ್ರವಾಹ ಭೀತಿ ಶುರುವಾಗಿದೆ. ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದ ಪಕ್ಕದ ಹಳೆಯ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ಮೇಲೆ 4-5 ಅಡಿಯಷ್ಟು ನೀರು ಹರಿದು ಬರುತ್ತಿದ್ದು, ಗೋವನಕೊಪ್ಪ-ಕೊಣ್ಣೂರ ಮಾರ್ಗದ ರಸ್ತೆ ಸಂಪರ್ಕ ಕಡಿತವಾಗಿದೆ.