ಬೆಂಗಳೂರು: ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇದೇ ಮೊದಲ ಬಾರಿಗೆ ಸಾರ್ವಜನಿಕ ಆಸ್ತಿಪಾಸ್ತಿಗೆ ಮಾಡಿರುವ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಲು ತೀರ್ಮಾನ ತೆಗೆದುಕೊಂಡಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಈ ಸಂಬಂಧ ಪ್ರತಿಕ್ರಿಯೆ ನೀಡಿದ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ, ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಈ ರೀತಿಯ ದಂಗೆಗಳಾದಾಗ ಆಗಿರುವ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈ ಕೂಡಲೇ ಪ್ರಕ್ರಿಯೆ ಆರಂಭಿಸುವಂತೆ ಆದೇಶ ನೀಡಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿವಶಂಕರ ಮೂರ್ತಿ ಮೂಲಕ ತನಿಖೆ ಮಾಡಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಬೊಮ್ಮಾಯಿ ಹೇಳಿದರು. ಇಂದು ಸಂಜೆ ಡಿಜೆ ಹಳ್ಳಿ ಠಾಣೆಗೆ ಗೃಹಮಂತ್ರಿ ಭೇಟಿ ಕೊಟ್ಟು, ಪರಿಶೀಲಿಸಿದರು. ಗಲಭೆಯಿಂದ ಅಂದಾಜು 50 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ.
ಎಷ್ಟು ನಷ್ಟ?
* ಪೊಲೀಸ್ ವಾಹನ, ಸಾರ್ವಜನಿಕರ ವಾಹನ ಸೇರಿ ಒಟ್ಟು 52 ವಾಹನಗಳಿಗೆ ಹಾನಿ
* 2 ಇನ್ನೋವಾ, 2 ಕೆಎಸ್‍ಆರ್‌ಪಿ ವ್ಯಾನ್, 1 ಸಿಎಆರ್ ವ್ಯಾನ್
* 6 ಪೊಲೀಸ್ ಜೀಪ್, ಒಂದು ಚೀತಾ ಬೈಕ್, ಸ್ಟೇಷನ್ ಮುಂದೆ ಜಪ್ತಿ ಮಾಡಿ ನಿಲ್ಲಿಸಿದ್ದ 30 ಇತರೆ ಬೈಕ್
* ಒಂದು ಆಟೋ, 2 ಕಾರು, 1 ಬೈಕ್ ಭಸ್ಮ
* ಶಾಸಕರ ಮೂರಂತಸ್ತಿನ ಮನೆ, ಕಚೇರಿಗೆ ಬೆಂಕಿ
* ಡಿಜೆ ಹಳ್ಳಿ ಠಾಣೆಗೆ ಬೆಂಕಿ, ಕೆಜಿ ಹಳ್ಳಿ ಠಾಣೆ ಧ್ವಂಸ
* ಹತ್ತಕ್ಕೂ ಹೆಚ್ಚು ಅಂಗಡಿಗಳು ಧಗಧಗ