ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ವಿಧಾನ ಸಭೆ ಮತಕ್ಷೇತ್ರದಲ್ಲಿ ಬರುವ ಮಣಗುತ್ತಿ ಗ್ರಾಮದಲ್ಲಿಯ ಶಿವಾಜಿ ಪ್ರತಿಮೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಮಾಡಿರುವ ಟ್ವಿಟ್ ವೊಂದು ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಮಣಗುತ್ತಿಯಲ್ಲಿಯ ಶಿವಾಜಿ ಪ್ರತಿಮೆಯನ್ನು ತೆರವು ಮಾಡಿದ್ದನ್ನು ಆಕ್ಷೇಪಿಸಿದ ಶಾಸಕಿ ನಿಂಬಾಳ್ಕರ್ ಅವರು, ಸಕಲ ಸರಕಾರಿ ಗೌರವದೊಂದಿಗೆ ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪಿಸಬೇಕು ಮತ್ತು ರಾಜ್ಯ ಸರ್ಕಾರ ಕ್ಷಮೆಯನ್ನು ಕೇಳಬೇಕು ಎಂದು ಟ್ವೀಟ್ ಮೂಲಕ ಆಗ್ರಹಿಸಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಶಾಸಕಿ ಅವರು, ”ಶಿವಾಜಿ ಮಹಾರಾಜರ ಮೂರ್ತಿ ತೆರವು ದೇಶಕ್ಕೆ ಮಾಡಿದ ಅವಮಾನ. ಮೂರ್ತಿ ತೆರವು ಮಾಡಿರುವ ಅಧಿಕಾರಿಗಳು, ಜನರ ವಿರುದ್ಧ ಕ್ರಮ ಕೈಗೊಳ್ಳಬೇಕು”, ಎಂದು ಒತ್ತಾಯಿಸಿದ್ದಾರೆ.
ಈ ಮಧ್ಯೆ, ವಾಸ್ತವಾಂಶ ತಿಳಿದುಕೊಳ್ಳದೆ ಶಿವಾಜಿ ಮೂರ್ತಿ ತೆರವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ಸರಕಾರದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಬೆಳಗಾವಿ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೆ, ಮಹಾರಾಷ್ಟ್ರದಿಂದ ಮಣಗುತ್ತಿ ಗ್ರಾಮಕ್ಕೆ ಬಂದು ಶಾಂತಿ ಕದಡಲೆತ್ನಿಸಿದ ಶಿವಸೇನೆ ಕಾರ್ಯಕರ್ತರಿಗೆ ಬುದ್ಧಿ ಕಲಿಸಿದ ಕನ್ನಡ ಸಂಘಟನೆಗಳಿಗೆ ಕರ್ನಾಟಕ ನವನಿರ್ಮಾಣ ವೇದಿಕೆ 50 ಸಾವಿರ ರೂ.ಬಹುಮಾನ ಘೋಷಿಸಿದೆ. ಮತ್ತು ಶಾಸಕಿ ಅಂಜಲಿ ನಿಂಬಾಳ್ಕರ್ ತಕ್ಷಣ ರಾಜ್ಯದ ಜನರ ಕ್ಷಮೆ ಕೇಳದಿದ್ದರೆ ಅವರ ವಿರುದ್ಧ ಧರಣಿ ಆರಂಭಿಸುತ್ತೇವೆ ಎಚ್ಚರಿಕೆ ನೀಡಿದ್ದಾರೆ.