ಬೆಂಗಳೂರು: ರಾಜ್ಯದ ಹಲವೆಡೆ ಧಾರಾಕಾರ ಮಳೆ ಆಗ್ತಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಡದಾಳ ಹಳ್ಳದಲ್ಲಿ ಕೊಚ್ಚಿಹೋಗ್ತಿದ್ದ ವಾಹನವನ್ನು ಸ್ಥಳೀಯರು ಹಗ್ಗ ಕಟ್ಟಿ ಎಳೆದಿದ್ದಾರೆ.
ವಾಹನದಲ್ಲಿದ್ದ ಐವರನ್ನು ರಕ್ಷಣೆ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯಲ್ಲೂ ಮಳೆ ಆರ್ಭಟ ಜೋರಾಗಿದೆ. ಜಗಳೂರು ತಾಲೂಕಿನ ಸಾಲಹಳ್ಳಿ-ಹಾಲಹಳ್ಳಿ ಮಧ್ಯೆ ಇರೋ ಚೆಕ್‍ಡ್ಯಾಂ ಕೊಚ್ಚಿಕೊಂಡು ಹೋಗಿದೆ. ದಾವಣಗೆರೆ ಬಾಡಾದಲ್ಲಿ ಮನೆಗಳಿಗೆ ನೀರು ನುಗ್ಗಿದೆ.
ರಾಯಚೂರು ಜಿಲ್ಲೆಯಲ್ಲೂ ಧಾರಾಕಾರ ಮಳೆ ಆಗ್ತಿದೆ. ಮಸ್ಕಿ ತಾಲೂಕಿನ ಮಾರಲದಿನ್ನಿಯಲ್ಲಿರುವ ಮಸ್ಕಿ ಜಲಾಶಯದಿಂದ ನೀರನ್ನು ಹೊರಬಿಡಲಾಗಿದೆ. ರಾಯಚೂರಿನ ಸಿಯತಲಾಬ್‍ನಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಬಳ್ಳಾರಿ ಜಿಲ್ಲೆಯ ಶ್ರೀಕಂಠಾಪುರ ತಾಂಡ ಮಳೆಯಿಂದ ಜಲಾವೃತಗೊಂಡಿತ್ತು. ತಾಂಡಾದ ಹಿಂಭಾಗ ಇರುವ ಹಳ್ಳದಿಂದ ತಾಂಡಾಕ್ಕೆ ನೀರು ನುಗ್ಗಿತ್ತು. ನೀರಿನ ರಭಸಕ್ಕೆ ಜಮೀನಿನಲ್ಲಿದ್ದ ಟ್ರಾಕ್ಟರ್ ಇಂಜಿನ್ ಕೊಚ್ಚಿಕೊಂಡು ಹೋಗಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಕೆಲವು ಮನೆ, ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.