ಕೋಲಾರ: ಕೊರೊನಾ ಸೋಂಕಿಗೆ ತುತ್ತಾಗಿ ಸದ್ಯ ಗುಣಮುಖವಾಗಿರುವ ಜನರು ದೇವರೇ ಬದುಕಿತು ಬಡಜೀವ ಎಂದು ಕೊಳ್ಳುತ್ತಿದ್ದಾರೆ. ಆದರೆ ಹೋದೆ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಎಂಬಂತೆ ಮತ್ತೆ ಸೋಂಕು ವಕ್ಕರಿಸಲಾರಂಭಿಸಿದೆ.
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದುವರೆಗೂ ಸುಮಾರು 284 ಮಂದಿ ಜನರು ಕೊರೊನಾವನ್ನು ಗೆದ್ದು ಬಂದಿದ್ದಾರೆ. ಆದ್ರೆ ಈಗ ಕೊರೊನಾ ಗೆದ್ದು ಬಂದ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ 46 ವರ್ಷದ ಮಹಿಳೆಯಲ್ಲಿ ಮತ್ತೆ ಕೊರೊನಾ ಸೋಂಕು ಪತ್ತೆಯಾಗಿದೆ. ಇದು ಸದ್ಯ ಆರೋಗ್ಯ ಇಲಾಖೆಯ ಮತ್ತು ಕೋಲಾರ ಜನರ ನಿದ್ದೆಗೆಡಿಸಿದೆ. ಇನ್ನು ಆತಂಕಗೊಂಡಿರುವ ಜಿಲ್ಲಾಡಳಿತ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಹೋಗಿರುವ ಎಲ್ಲರನ್ನು ಮತ್ತೊಮ್ಮೆ ಕೊರೊನಾ ಟೆಸ್ಟ್ ಮಾಡಲು ಹಾಗೂ ಹೋಂ ಕ್ವಾರಂಟೈನ್ ಮಾಡಲು ನಿರ್ಧರಿಸಿದೆ. ಜೊತೆಗೆ ಬಿಡುಗಡೆಯಾಗಿ ಮನೆಗಳಿಗೆ ತೆರಳಿರುವವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.ಒಂದು ಬಾರಿ ಕೊರೊನಾ ಸೋಂಕಿನಿಂದ ಗುಣವಾಗಿದ್ದ ಮಹಿಳೆಯಲ್ಲಿ ಕೆಲವು ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಕೋವಿಡ್ ಟೆಸ್ಟ್ ಮಾಡಿಸಿದಾಗ ಆ ಮಹಿಳೆಯಲ್ಲಿ ಪಾಸಿಟಿವ್ ಬಂದಿದೆ. ಹಾಗಾಗಿ ಮತ್ತೆ ಮಹಿಳೆಯನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸೋಂಕು ಮತ್ತೊಮ್ಮೆ ಹೇಗೆ ಬಂತೆಂದು ಕಾರಣ ಹುಡುಕಾಟ ಮಾಡುತ್ತಿದ್ದಾರೆ.
ಮಹಿಳೆ ಮನೆಗೆ ಹೋದ ಮೇಲೆ ಮತ್ತೊಮ್ಮೆ ಬೇರೆಯವರಿಂದ ಸೋಂಕು ಹರಡಿದ್ದೀಯಾ ಅಥವಾ ಮಹಿಳೆಯ ದೇಹದಲ್ಲಿ ಇನ್ ಪೆಕ್ಷನ್ ನಿಂದ ಸೋಂಕು ಬಂದಿದ್ಯಾ? ಇಲ್ಲಾ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗಿದರಿಂದ ಮತ್ತೆ ಸೋಂಕು ಆಕ್ಟಿವ್ ಆಗಿದ್ಯಾ ಅನ್ನೋದರನ್ನು ಕುರಿತು ಆರೋಗ್ಯ ಅಧಿಕಾರಿಗಳು ಪತ್ತೆಹಚ್ಚುವಲ್ಲಿ ನಿರತಾಗಿದ್ದಾರೆ. ಕೋಲಾರದಲ್ಲಿ ಕೊರೊನಾ ರಣಕೇಕೆ ದಿನದಿಂದ ದಿನಕ್ಕೇರುತ್ತಿದ್ದು, 284 ಜನ ಕೊರೊನಾದಿಂದ ಗುಣಮುಖರಾಗಿ ಹೊರ ಹೋಗಿದ್ದಾರೆ. ಈವರೆಗೆ ಕೊರೊನಾ ಸೋಂಕಿಗೆ 19 ಜನ ಬಲಿಯಾಗಿದ್ದಾರೆ ಇಂಥ ಪರಿಸ್ಥಿತಿಯಲ್ಲಿ ಗುಣಮುಖರಾದವರಲ್ಲಿ ಸೋಂಕು ಮತ್ತೆ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.