ಬೆಳಗಾವಿ: ‘ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಗಣೇಶೋತ್ಸವ ಆಚರಿಸಲು ಅವಕಾಶ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ನಗರದ ಗಣೇಶೋತ್ಸವ ಮಂಡಳಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಿರುವುದರಿಂದ ಇದನ್ನು ತಡೆಗಟ್ಟುವ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕಿದೆ. ಆದ್ದರಿಂದ ಸರ್ಕಾರದ ನಿರ್ದೇಶನದ ಮೇರೆಗೆ ಅವಕಾಶ ಕಲ್ಪಿಸಲಾಗುವುದು.
‘ಗಣೇಶೋತ್ಸವ ಮಂಡಳಿಗಳ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು. ಐಸಿಎಂಆರ್ ಮಾರ್ಗಸೂಚಿ ಬಂದ ಬಳಿಕ ಮತ್ತೊಮ್ಮೆ ಎಲ್ಲ ಮಂಡಳಿಗಳ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು.
‘ಹಬ್ಬಗಳ ಸಾಲು ಆರಂಭಗೊಂಡಿದ್ದು, ಇದರೊಂದಿಗೆ ಕೋವಿಡ್ ನಿಯಂತ್ರಣದ ಕಡೆಯೂ ಎಲ್ಲರೂ ಗಮನಹರಿಸಬೇಕಿದೆ. ಎರಡು ಮೂರು ದಿನಗಳಲ್ಲಿ ಮಾರ್ಗಸೂಚಿ ಬಿಡುಗಡೆ ಆಗಲಿದೆ. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸುಮಾರು 5 ಸಾವಿರ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಆಗಲಿದೆ. ಆದ್ದರಿಂದ ಮಾರ್ಗಸೂಚಿ ಏನೇ ಇರಲಿ; ಎಲ್ಲರೂ ಸಹಕರಿಸಬೇಕು’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ , ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಉಪ ವಿಭಾಗಾಧಿಕಾರಿ ಅಶೋಕ ಇದ್ದರು.
Laxmi News 24×7