ಧಾರವಾಡ: ಕೊರೊನಾ ನಿಯಂತ್ರಣ ವಿಚಾರದಲ್ಲಿ ಸರ್ಕಾರ ಸರಿಯಾಗಿ ಕೆಲಸವಾಗುತ್ತಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಸರ್ಕಾರ ಇದಕ್ಕೆ ಉತ್ತರ ಕೊಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರ ನೋಟದಲ್ಲಿ ಕೊರೊನಾ ಪ್ರಕ್ರಿಯೆಯಲ್ಲಿ ಗೊಂದಲ ಕಾಣುತ್ತಿದೆ. ರಾಜ್ಯ ಸರ್ಕಾರ ಡಾ.ಕಜೆಯವರ 70 ಲಕ್ಷ ಆಯುರ್ವೇದಿಕ್ ಮಾತ್ರೆ ಖರೀದಿಸಿದೆ ಅದನ್ನು ಎಲ್ಲಿಯೂ ವಿತರಿಸುತ್ತಿಲ್ಲ. ಇದರಿಂದ ಸರ್ಕಾರದ ಮೇಲೆ ಸಂಶಯ ಬರುತ್ತದೆ. ವಿರೋಧ ಪಕ್ಷದವರ ಆರೋಪ ಸತ್ಯಕ್ಕೆ ಹತ್ತಿರವಾದದ್ದು, ಅಲೋಪತಿಕ್ ಮಾಫಿಯಾ ದೊಡ್ಡದಿದೆ. ಈ ಲಾಬಿಗೆ ಕಜೆಯವರ ಔಷಧ ಬಲಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಬಕ್ರೀದ್ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆ ಗೋವುಗಳನ್ನು ರಕ್ಷಣೆ ಮಾಡಬೇಕು. ವಿಜಯಪುರದ ಡಿಸಿ ನಿರ್ಧಾರ ಒಳ್ಳೆಯದಿದೆ, ಅಕ್ರಮ ಗೋವು ಸಾಗಾಟ ತಡೆಗೆ ಎಂಟು ತಂಡ ರಚಿಸಿ ಡಿಸಿ ಒಳ್ಳೆಯ ಕ್ರಮ ಕೈಗೊಂಡಿದ್ದಾರೆ. ಇದೇ ರೀತಿಯ ಕ್ರಮ ಎಲ್ಲಡೆ ಆಗಬೇಕು. ಈಗಾಗಲೇ ಅನೇಕ ಕಡೆ ಗೋವು ಕಳ್ಳತನವಾಗಿವೆ, ಅವು ನಮ್ಮ ಗಮನಕ್ಕೆ ಬಂದಿವೆ ಎಂದ ಅವರು, ಕೂಡಲೇ ಈ ಬಗ್ಗೆ ಎಲ್ಲ ಡಿಸಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ