ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ರಾಕೆಟ್ ವೇಗದಲ್ಲಿ ಏರಿಕೆಯಾಗುತ್ತಿದ್ದು, ಇದಕ್ಕೆ ಕ್ವಾರಂಟೈನ್‌ಗಳು ಒಂದು ರೀತಿಯಲ್ಲಿ ಕಾರಣರಾಗಿದ್ದಾರೆ. ಇಲ್ಲಿಯವರೆಗೆ ಬರೋಬ್ಬರಿ 1.51 ಲಕ್ಷ ಮಂದಿ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
ಹೌದು. ಕೋವಿಡ್ 19 ಸೋಂಕಿತರ ಪ್ರಥಮ ಸಂಪರ್ಕ ಮತ್ತು ದ್ವಿತೀಯ ಸಂಪರ್ಕಿತರು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಆದರೆ ಕರ್ನಾಟಕದಲ್ಲಿ 2.25 ಲಕ್ಷ ಮಂದಿ ಈ ನಿಯಮವನ್ನು ಉಲ್ಲಂಘಿಸಿ ಸುತ್ತಾಟ ಮಾಡಿದ್ದಾರೆ.
ಈ ಪೈಕಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು 1.51 ಲಕ್ಷ ಮಂದಿ ಸುತ್ತಾಟ ಮಾಡಿದ್ದಾರೆ. ನಿಯಮ ಉಲ್ಲಂಘಿಸಿದವರಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಈಗಾಗಲೇ 1,645 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹೋಮ್ ಕ್ವಾರಂಟೈನ್ ಉಲ್ಲಂಘಿಸಿದ 2,205 ಮಂದಿಯನ್ನ ಸಾಂಸ್ಥಿಕ ಕ್ವಾರಂಟೈನ್ ಒಳಪಡಿಸಲಾಗಿದೆ.
ಕ್ವಾರಂಟೈನಿಗಳ ಕೈಗೆ ಸೀಲ್, ಮನೆಗೆ ಭಿತ್ತಿಪತ್ರ ಅಂಟಿಸಲಾಗುತ್ತದೆ. ಅವರ ಚಟುವಟಿಕೆ, ಚಲನವಲನಗಳ ಮೇಲೆ ಅಕ್ಕಪಕ್ಕದವರು ನಿಗಾ ಇಡಬೇಕು. ಅವರು ಮನೆಯಿಂದ ಹೊರಬಂದರೆ ಪೊಲೀಸರಿಗೆ ಮಾಹಿತಿ ಕೊಡಬೇಕು. ಆಗ ಮಾತ್ರ ಕೊರೊನಾ ಹಬ್ಬುವುದನ್ನು ತಪ್ಪಿಸಬಹುದು.
ಹೋಮ್ ಕ್ವಾರಂಟೈನ್ ನಿಯಮವನ್ನು ಪದೇ ಪದೇ ಉಲ್ಲಂಘಿಸಿ ಸ್ಥಳೀಯರು ದೂರು ನೀಡಿದರೆ ಸ್ಥಳಕ್ಕೆ ಪೊಲೀಸರು ಬಂದು ವ್ಯಕ್ತಿಯನ್ನು ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಾರೆ.
ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಕ್ಕೆ ಬೆಳಗಾವಿಯಲ್ಲಿ 124, ಕಲಬುರಗಿಯಲ್ಲಿ 106 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.