ಹಾವೇರಿ: ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನಲ್ಲಿ ಬುಧವಾರದಿಂದ ಐದು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.
ಅಧಿಕಾರಿಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಸಲಹೆ ಮೇರೆಗೆ ರಾಣೇಬೆನ್ನೂರು ಶಾಸಕ ಅರುಣ್ ಕುಮಾರ್ ಗುತ್ತೂರ ಇಂದು ಈ ನಿರ್ಧಾರ ಪ್ರಕಟಿಸಿದ್ದಾರೆ. ಲಾಕ್‍ಡೌನ್ ವೇಳೆ ಹಾಲು, ದಿನಪತ್ರಿಕೆ ಮತ್ತು ವೈದ್ಯಕೀಯ ಸೇವೆಗಳಿಗೆ ಮಾತ್ರ ಅವಕಾಶವಿದ್ದು, ಉಳಿದಂತೆ ಎಲ್ಲವೂ ಲಾಕ್‍ಡೌನ್ ಆಗಲಿದೆ. ಯಾರೂ ಮನೆಯಿಂದ ಹೊರಬರದೆ ಲಾಕ್‍ಡೌನ್‍ಗೆ ಸಹಕರಿಸುವಂತೆ ಶಾಸಕರು ಮನವಿ ಮಾಡಿದ್ದಾರೆ. ಮತ್ತೊಂದೆಡೆ ಜಿಲ್ಲೆಯ ಶಿಗ್ಗಾಂವಿ, ಗುತ್ತಲ ಮತ್ತು ರಟ್ಟೀಹಳ್ಳಿ ಪಟ್ಟಣಗಳಲ್ಲಿ ಕಳೆದ ಕೆಲವು ದಿನಗಳಿಂದ ಅರ್ಧ ದಿನದ ಲಾಕ್‍ಡೌನ್ ಘೋಷಿಸಲಾಗಿದೆ.

ಶಿಗ್ಗಾಂವಿ ಮತ್ತು ಗುತ್ತಲ ಪಟ್ಟಣಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶವಿದೆ. ನಂತರ ಲಾಕ್‍ಡೌನ್ ಜಾರಿಯಾಗಲಿದೆ. ಶಿಗ್ಗಾಂವಿ ಪಟ್ಟಣದಲ್ಲಿ ಈಗಾಗಲೇ ಅಂದರೆ ಜುಲೈ 5ರಿಂದ ಆಗಸ್ಟ್ 2ರ ವರೆಗೆ ಮಧ್ಯಾಹ್ನ 12 ಗಂಟೆ ನಂತರ ಲಾಕ್‍ಡೌನ್ ಜಾರಿಯಲ್ಲಿದೆ. ಸಾರ್ವಜನಿಕರು ಮತ್ತು ವ್ಯಾಪಾರಸ್ಥರ ಒತ್ತಾಯದ ಮೇರೆಗೆ ತಾಲೂಕು ಆಡಳಿತ ಹನ್ನೆರಡು ಗಂಟೆ ನಂತರ ಶಿಗ್ಗಾಂವಿ ಪಟ್ಟಣದಲ್ಲಿ ಲಾಕ್‍ಡೌನ್ ಘೋಷಿಸಿದೆ.
Laxmi News 24×7