ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನಡಾ ಕಂಪನಿ ಮಾರಾಟ ಮಾಡುವ ಯಾವುದೇ ವಿಮಾನದ ಮೇಲೆ 50% ಸುಂಕ ವಿಧಿಸುವುದಾಗಿ ಹೇಳಿದ್ದಾರೆ.
ಚೀನಾದೊಂದಿಗೆ ವ್ಯಾಪಾರ ಒಪ್ಪಂದದೊಂದಿಗೆ ಮುಂದುವರಿದರೆ ಕೆನಡಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ 100% ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ ಒಂದು ವಾರದ ಬಳಿಕ ಟ್ರಂಪ್ ಅವರಿಂದ ಈಗ ಕೆನಡಾಗೆ ಮತ್ತೊಂದು ಬೆದರಿಕೆ ಬಂದಿದೆ.
ಜಾರ್ಜಿಯಾ ಮೂಲದ ಸವನ್ನಾ ಮೂಲದ ಗಲ್ಫ್‌ಸ್ಟ್ರೀಮ್ ಏರೋಸ್ಪೇಸ್‌ನಿಂದ ಜೆಟ್‌ಗಳನ್ನು ಪ್ರಮಾಣೀಕರಿಸಲು ಕೆನಡಾ ನಿರಾಕರಿಸಿದ್ದಕ್ಕೆ ಪ್ರತಿಯಾಗಿ ಟ್ರಂಪ್ ಸುಂಕ ವಿಧಿಸುವ ಬೆದರಿಕೆಯನ್ನು ಹಾಕಿದ್ದಾರೆ.
ತಮ್ಮ ಟ್ರೂಥ್ ಪೋಸ್ಟ್‌ನಲ್ಲಿ, ಇದುವರೆಗೆ ತಯಾರಿಸಿದ ಶ್ರೇಷ್ಠ, ತಾಂತ್ರಿಕವಾಗಿ ಮುಂದುವರಿದ ವಿಮಾನಗಳಲ್ಲಿ ಒಂದಾದ ಗಲ್ಫ್‌ಸ್ಟ್ರೀಮ್ 500, 600, 700 ಮತ್ತು 800 ಜೆಟ್‌ಗಳನ್ನು ಪ್ರಮಾಣೀಕರಿಸಲು ಕೆನಡಾ ನಿರಾಕರಿಸುವ ಮೂಲಕ ತಪ್ಪು ಮಾಡಿದೆ. ಆದರೆ ಕೆನಡಾದ ಬೊಂಬಾರ್ಡಿಯರ್ ಗ್ಲೋಬಲ್ ಎಕ್ಸ್‌ಪ್ರೆಸ್ ಸೇರಿದಂತೆ ಅವರು ತಯಾರಿಸಿದ ಎಲ್ಲಾ ವಿಮಾನಗಳನ್ನು ಪ್ರಮಾಣೀಕರಿಸಿದ್ದೇವೆ. ಹೀಗಾಗಿ ಕೂಡಲೇ ಕೆನಡಾ ಗಲ್ಫ್‌ಸ್ಟ್ರೀಮ್ ವಿಮಾನವನ್ನು ಪ್ರಮಾಣೀಕರಿಸಬೇಕು. ಒಂದು ವೇಳೆ ಈ ತಪ್ಪನ್ನು ಸರಿ ಮಾಡದೇ ಇದ್ದರೆ ಅಮೆರಿಕಕ್ಕೆ ಮಾರಾಟವಾಗುವ ಯಾವುದೇ ಮತ್ತು ಎಲ್ಲಾ ಕೆನಡಾ ನಿರ್ಮಿತ ವಿಮಾನಗಳ ಮೇಲೆ 50% ಸುಂಕವನ್ನು ವಿಧಿಸಲಿದ್ದೇನೆ ಎಂದು ಬರೆದಿದ್ದಾರೆ.
ಟ್ರಂಪ್ ಅವರ ಈ ಪೋಸ್ಟ್‌ಗೆ ಬೊಂಬಾರ್ಡಿಯರ್ ವಕ್ತಾರರು ಮತ್ತು ಕೆನಡಾ ಸರ್ಕಾರ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಧಾನಿ ಮಾರ್ಕ್ ಕಾರ್ನಿ ಅವರು ಕೆನಡಾದ ಅಧಿಕಾರ ಹಿಡಿದ ಬಳಿಕ ಟ್ರಂಪ್ ಅವರ ವಿರುದ್ಧ ವಾಗ್ದಾಳಿ ನಡೆಸಿಕೊಂಡೇ ಬಂದಿದ್ದಾರೆ. ಕೆನಡಾ ಚೀನಾದ ಜೊತೆ ವ್ಯಾಪಾರ ಒಪ್ಪಂದ ಮಾಡಲು ಮುಂದಾಗಿತ್ತು. ಈ ಒಪ್ಪಂದಕ್ಕೆ ಟ್ರಂಪ್ ಆಕ್ಷೇಪ ವ್ಯಕ್ತಪಡಿಸಿ ಒಂದು ವೇಳೆ ಒಪ್ಪಂದ ಮಾಡಿಕೊಂಡರೇ ಕೆನಡಾದ ವಸ್ತುಗಳಿಗೆ 100% ಸುಂಕ ವಿಧಿಸುವ ಬೆದರಿಕೆ ಹಾಕಿದ್ದರು. ಈ ಬೆದರಿಕೆಯ ಬೆನ್ನಲ್ಲೇ ಕೆನಡಾ ಒಪ್ಪಂದದಿಂದ ಹಿಂದೆ ಸರಿದಿತ್ತು.
Laxmi News 24×7