ಬೆಂಗಳೂರು: ಕೊರೊನಾ ಭೀತಿಯಿಂದ ಸ್ವಯಂ ಕ್ವಾರಂಟೈನ್ ಅಗಿರುವ ಸಿಎಂ ಯಡಿಯೂರಪ್ಪನವರು ಪುಸ್ತಕಗಳನ್ನು ಓದುವ ಮೂಲಕ ಕಾಲಕಳೆಯುತ್ತಿದ್ದಾರೆ.
ಸಿಎಂ ಅವರ ಗೃಹ ಕಚೇರಿ ಕೃಷ್ಣಾ, ಅಧಿಕೃತ ನಿವಾಸ ಕಾವೇರಿ ಮತ್ತು ಅವರ ಧವಳಗಿರಿಯ ನಿವಾಸದಲ್ಲಿ ಕೆಲಸ ಮಾಡುವ ಕೆಲ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಕಾರಣದಿಂದ ಯಡಿಯೂರಪ್ಪನವರು ಶುಕ್ರವಾದಿಂದ ಐದು ದಿನಗಳ ಕಾಲ ತಮ್ಮ ಕಾವೇರಿ ನಿವಾಸದಲ್ಲಿ ಕ್ವಾರಂಟೈನ್ ಆಗಿದ್ದಾರೆ.
ಈ ವೇಳೆ ಪುಸ್ತಕಗಳನ್ನು ಓದುತ್ತಾ ಸಮಯ ದೂಡುತ್ತಿರುವ ಬಿಎಸ್‍ವೈ, ಬಿಡುವಿನ ವೇಳೆಯಲ್ಲಿ ನನಗೆ ಅತ್ಯಂತ ಪ್ರಿಯವಾದ ಕಾಲಕ್ಷೇಪವೆಂದರೆ ಓದುವುದು. ನೂರಾರು ಸಂಗತಿಗಳ ಬಗ್ಗೆ ತಿಳಿದಷ್ಟೂ ತಿಳಿಯಬಹುದಾದ ವಿಷಯಗಳಿವೆ, ಜ್ಞಾನಾರ್ಜನೆ ಎಂದೂ ಮುಗಿಯದ ಕಾಯಕ. ಇಂದಿನ ಭಾನುವಾರದ ಲಾಕ್‍ಡೌನ್ ಮತ್ತು ಸ್ವಯಂ ಕ್ವಾರಂಟೈನ್‍ನಲ್ಲಿರುವ ವೇಳೆ ಸಿಕ್ಕ ಸ್ವಲ್ಪ ಬಿಡುವಿನ ಸಮಯವನ್ನು ಖಾಂಡೇಕರ್ ಅವರ ಯಯಾತಿಯ ಜೊತೆಗೆ ಕಳೆಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಕ್ವಾರಂಟೈನ್ ಆಗುತ್ತಿರುವ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದ ಸಿಎಂ, ಗೃಹ ಕಚೇರಿ ಕೃಷ್ಣಾದಲ್ಲಿ ಕೆಲ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿರುವ ಕಾರಣ ಇಂದಿನಿಂದ ಕೆಲ ದಿನಗಳ ಕಾಲ ಮನೆಯಿಂದಲೇ ನನ್ನ ಕರ್ತವ್ಯಗಳನ್ನು ನಿರ್ವಹಿಸಲಿದ್ದೇನೆ. ವೀಡಿಯೋ ಕಾನ್ಫರೆನ್ಸ್ ಮುಖಾಂತರ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದ್ದೇನೆ ಎಂದು ತಿಳಿಸಿದ್ದರು. ಜೊತೆಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ನಾನು ಆರೋಗ್ಯವಾಗಿದ್ದೇನೆ. ಎಲ್ಲರೂ ಮುನ್ನೆಚ್ಚರಿಕೆಯ ಕ್ರಮಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಎಂದಿದ್ದರು.