Breaking News

ಗೋ ಬ್ಯಾಕ್ ಗವರ್ನರ್ ಅನ್ನೋದು ರಾಜಕೀಯ ನಾಟಕ – ಹೆಚ್‌ಡಿಕೆ ಕಿಡಿ

Spread the love

ಮಂಡ್ಯ: ರಾಜ್ಯಪಾಲರ ವಿರುದ್ಧ ಗೋ ಬ್ಯಾಕ್, ಗೋ ಬ್ಯಾಕ್ ಎನ್ನುತ್ತಿರುವ ರಾಜ್ಯ ಕಾಂಗ್ರೆಸ್  ಏನು ಸಾಧಿಸುವುದಿಲ್ಲ. ಗೋ ಬ್ಯಾಕ್ ಗವರ್ನರ್ ಅನ್ನೋದು ಕೇವಲ ರಾಜಕೀಯ ನಾಟಕ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಮಂಡ್ಯದಲ್ಲಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ರಾಜ್ಯಪಾಲರುಗಳ ವಿಷಯದಲ್ಲಿ ಹೇಗೆ ನಡೆದುಕೊಂಡಿತ್ತು ಎಂಬುದರ ಬಗ್ಗೆ ಒಮ್ಮೆ ನೆನಪು ಮಾಡಿಕೊಂಡರೆ ಅವರ ಬಣ್ಣ ಏನೆಂದು ಗೊತ್ತಾಗುತ್ತದೆ. ವಿಶೇಷ ಅಧಿವೇಶನ ಕರೆದು ಅಲ್ಲಿ ಸಮಯ ಪೋಲು ಮಾಡುತ್ತಿದ್ದಾರೆ. ರಾಜ್ಯಪಾಲರು ಭಾಷಣ ಓದದಿರುವ ಅಥವಾ ಮೊಟಿಕುಗೊಳಿಸಿರುವ ಘಟನೆ ಇದೇ ಮೊದಲ ಬಾರಿ ನಡೆದಿದ್ದು ಅಲ್ಲ. ಜೆ.ಹೆಚ್.ಪಟೇಲರು ಸಿಎಂ ಆಗಿದ್ದಾಗ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಅಂದಿನ ಸಂದರ್ಭವನ್ನು ನೆನಪು ಮಾಡಿಕೊಳ್ಳಬೇಕು. ಈಗ ನೋಡಿದರೆ ಅನಗತ್ಯವಾಗಿ ವಿಧಾನಸಭೆ ಕಲಾಪದಲ್ಲಿ ಸಂಘರ್ಷ ನಡೆಯುತ್ತಿದೆ. ಈ ಸಂಘರ್ಷಗಳಿಂದ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದಾ? ಗೋ ಬ್ಯಾಕ್ ಗವರ್ನರ್ ಅನ್ನೋದು ಕೇವಲ ರಾಜಕೀಯ ನಾಟಕ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನರೇಗಾ ವಿಷಯ ಇಟ್ಟುಕೊಂಡು ಕೇಂದ್ರ ಸರ್ಕಾರವನ್ನು ನಿಂದಿಸುವುದು ಈ ಸರ್ಕಾರದ ಉದ್ದೇಶ. ಅದಕ್ಕಾಗಿಯೇ ವಿಶೇಷ ಅಧಿವೇಶನ ಕರೆದಿದ್ದಾರೆ. ಪದೇ ಪದೇ ದಲಿತರ ಹೆಸರು ಬಳಸಿ ತಮ್ಮ ಸ್ಥಾನಮಾನ ಗಟ್ಟಿಗೊಳಿಸುವ ಪ್ರಯತ್ನದಲ್ಲಿದ್ದಾರೆ. ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ, ವರ್ಗದ ಜನರಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಸಿದ್ದಾರೆ. ಇದು ದಲಿತರ ಉದ್ಧಾರವೇ? ಎಂದು ಕಿಡಿಕಾರಿದರು.

ಈ ಸರ್ಕಾರದಲ್ಲಿ ಹಲವಾರು ಅಕ್ರಮಗಳು ನಡೆದಿದೆ. ಕಾನೂನು ಬಾಹಿರ ನಿರ್ಧಾರಗಳ ಬಗ್ಗೆ ರಾಜ್ಯಪಾಲರು ಕ್ರಮ ಕೈಗೊಳ್ಳುವ ಅವಕಾಶ ಇದ್ದರೂ ರಾಜ್ಯಪಾಲರು ಬೇರೆ ರಾಜ್ಯಗಳ ರಾಜ್ಯಪಾಲರ ರೀತಿ ನಮ್ಮ ಸರ್ಕಾರದ ಜೊತೆ ಸಂಘರ್ಷ ಮಾಡಲಿಲ್ಲ. ಅದನ್ನು ಈ ಸರ್ಕಾರ ಅರ್ಥ ಮಾಡಿಕೊಂಡಿಲ್ಲ. ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರ ವಿಶ್ವಾಸದಲ್ಲಿ ಇಲ್ಲ. ಕೇಂದ್ರದ ಅನುದಾನದ ಬಗ್ಗೆ ರಾಜ್ಯ ಸರ್ಕಾರ ಪಾರದರ್ಶಕವಾಗಿ ಮಾಡಿಕೊಂಡಿಲ್ಲ. ಇವರ ತಪ್ಪಿನಿಂದ ಕೆಲ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ವಾಪಸ್ ಹೋಗಿವೆ. ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು.

ರೈತರಿಗೆ ಈ ಸರ್ಕಾರ ಸರಣಿ ಅನ್ಯಾಯ ಮಾಡಿದೆ. ಬೆಳೆ ಬೆಳೆದ ರೈತರನ್ನ ಇವರು ಕಾಪಾಡಿದ್ದೀರಾ? ಕೇಂದ್ರ ಸರ್ಕಾರ ಅನುಮತಿ ಕೊಟ್ಟ ಮಾನದಂಡದಲ್ಲಿ ಎಷ್ಟು ಬೆಳೆ ಖರೀದಿ ಮಾಡಿದ್ದೀರಿ ಎಂಬುದನ್ನು ಹೇಳಲಿ? ಮಾವಿನ ಬೆಲೆ ಕುಸಿದಾಗ ಕೇಂದ್ರ ಸರ್ಕಾರದ ಮುಂದೆ ಇವರು ಅರ್ಜಿ ಹಿಡಿದುಕೊಂಡು ಹೋಗಿದ್ದರು. ನಾನು ಸಿಎಂ ಆಗಿದ್ದಾಗ ಮಾವು ಬೆಲೆ ಕುಸಿದಾಗ ರಾಜ್ಯ ಸರ್ಕಾರದ ವತಿಯಿಂದಲೇ ಹಣ ಕೊಟ್ಟೆ. ಇವರಿಗೆ ಕೆಲಸ ಮಾಡಲು ಆಗುತ್ತಿಲ್ಲ, ಆದರೆ ಕೇಂದ್ರವನ್ನು ನಿಂದಿಸಲು ನೆಪ ಹುಡುಕುತ್ತಾರೆ ಎಂದು ಕಟುವಾಗಿ ಟೀಕಿಸಿದರು.

ಸಂಘರ್ಷಗಳಿಂದ ಸಮಸ್ಯೆ ಬಗೆಹರಿಯಲ್ಲ. ಕೇಂದ್ರದ ಜೊತೆ ವಿಶ್ವಾಸದಲ್ಲಿದ್ದು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ನಾನು ಸಲಹೆ ನೀಡುತ್ತೇನೆ. ಮಾತೆತ್ತಿದರೆ ದೊಡ್ಡ ಪ್ರಮಾಣದ ಟ್ಯಾಕ್ಸ್ ಕಟ್ಟುತ್ತಿದ್ದೇವೆ ಅಂತೀರಾ? ತೆರಿಗೆ ಕಟ್ಟುವವರು ಜನರು. ರಾಜ್ಯದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆಗಳಾಗಬೇಕು. ಅದನ್ನು ಬಿಟ್ಟು ಕೇವಲ ಹೈಡ್ರಾಮಾ ನಡೆಸಿದರೆ ಏನೂ ಆಗುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಕರ್ನಾಟಕ ರಾಜ್ಯವೇ ನನ್ನ ಪರಿಮಿತಿ:
ರಾಜ್ಯ ರಾಜಕಾರಣಕ್ಕೆ ಹೆಚ್‌ಡಿಕೆ ವಾಪಸ್ ಬರುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ರಾಜ್ಯವೇ ನನ್ನ ಪರಿಮಿತಿ. ಜನರು ಎಲ್ಲಿ ಅಪೇಕ್ಷೆ ಮಾಡುತ್ತಾರೆ ಅಲ್ಲಿಂದ ನಾನು ಸ್ಪರ್ಧೆ ಮಾಡುತ್ತೇನೆ. ಮಂಡ್ಯದಿಂದ ಲೋಕಸಭೆ ಚುನಾವಣೆಗೆ ನಿಲ್ಲುವ ಉದ್ದೇಶ ಇರಲಿಲ್ಲ. ಪುಟ್ಟರಾಜು ಅವರನ್ನು ನಿಲ್ಲಿಸಬೇಕು ಎಂದುಕೊಂಡಿದ್ದೆ. ಅವತ್ತು ಅನಿವಾರ್ಯವಾಗಿ ನಾನು ಎಲೆಕ್ಷನ್‌ಗೆ ನಿಂತೆ. ಸಂಸದನಾಗುತ್ತೇನೆ, ಕೇಂದ್ರ ಮಂತ್ರಿ ಆಗುತ್ತೇನೆ ಎಂದು ನನಗೆ ಗೊತ್ತಿರಲಿಲ್ಲ. ನಮ್ಮ ಪಕ್ಷದಿಂದ ಬೇರೆ ಪಕ್ಷಕ್ಕೆ ಹೋದವರು ಜೆಡಿಎಸ್ ಕಥೆ ಮುಗಿಯಿತು ಎಂದರು. ಆದರೆ, ನಮ್ಮ ಪಕ್ಷ ಯಾವ ರೀತಿಯಲ್ಲಿ ಗಟ್ಟಿಯಾಗುತ್ತಿದೆ ಎನ್ನುವುದು ಅವರಿಗೆ ಗೊತ್ತಿಲ್ಲ. ಕೆಲವರಿಗೆ ಜೆಡಿಎಸ್ ಪಕ್ಷದ್ದೇ ಯೋಚನೆ. ನಮ್ಮ ಪಕ್ಷವನ್ನು ಮುಗಿಸಬೇಕು ಎನ್ನುವುದೇ ಅವರ ಚಿಂತೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ವಿರುದ್ಧ ಬಿಜೆಪಿ, ಜೆಡಿಎಸ್ ಒಗ್ಗಟ್ಟಿನ ಹೋರಾಟ:
ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಇಲ್ಲ ಎಂಬ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಕೆಟ್ಟ ಆಡಳಿತವನ್ನು ಕಿತ್ತೊಗೆಯಲು ಜೆಡಿಎಸ್-ಬಿಜೆಪಿ ಒಟ್ಟಾಗಿ ಹೋರಾಟ ನಡೆಸುತ್ತವೆ. ಈ ಹಿನ್ನಲೆಯಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ನಾವು ಮೈತ್ರಿ ಬಗ್ಗೆ ತೀರ್ಮಾನ ಮಾಡುತ್ತೇವೆ. ಸ್ಥಳೀಯ ಮಟ್ಟದಲ್ಲಿ ಪೈಪೋಟಿ ಇರುವುದು ಸಹಜ. ಎಲ್ಲಾ ಪಕ್ಷಗಳಲ್ಲಿ ಅದು ಇರುತ್ತದೆ. ಕಾರ್ಯಕರ್ತರು ಸ್ಥಾನಮಾನಕ್ಕಾಗಿ ಚರ್ಚೆ ಮಾಡುತ್ತಾರೆ. ಆ ಕುರಿತು ಅಂತಿಮವಾಗಿ ನಾವು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.


Spread the love

About Laxminews 24x7

Check Also

ಚಿಕ್ಕಮಗಳೂರಿನ ಯುವಕನಿಗೆ ಜೋಡಿಯಾದ ಚೀನಾ ಚೆಲುವೆ!

Spread the loveಚಿಕ್ಕಮಗಳೂರು: ಪ್ರೇಮದೇಶ, ಭಾಷೆ, ಗಡಿ ಎಲ್ಲದ್ದನ್ನೂ ಮೀರಿದ್ದು.. ಅದಕ್ಕೆ ಸಾಕ್ಷಿ ಎಂಬಂತೆ ನಗರದ ಹೌಸಿಂಗ್ ಬೋರ್ಡಿನ ಯುವಕನಿಗೆ ಚೀನಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ