ಚಿಕ್ಕಮಗಳೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಎಗ್ಗಿಲ್ಲದೆ ಕೊರೊನಾ ಸೋಂಕು ಹಬ್ಬುತ್ತಿದೆ. ಇಂದು ಒಂದೇ ದಿನ 23 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದು, ಜಿಲ್ಲೆಯ ಜನ ಮತ್ತಷ್ಟು ಕಂಗಾಲಾಗಿದ್ದಾರೆ.
ಚಿಕ್ಕಮಗಳೂರು ಹಾಗೂ ಕಡೂರು ತಾಲೂಕಿನಲ್ಲಿ ಕೊರೊನಾ ಅಬ್ಬರ ಮುಂದುವರಿದಿದೆ. ಇಂದು ಚಿಕ್ಕಮಗಳೂರಿನಲ್ಲಿ 12 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಕಡೂರಿನಲ್ಲಿ ಎಂಟು ಪ್ರಕರಣಗಳು ಬೆಳಕಿಗೆ ಬಂದಿದೆ. ಉಳಿದಂತೆ ಜಿಲ್ಲೆಯ ಕೊಪ್ಪ, ಎನ್.ಆರ್.ಪುರ ಹಾಗೂ ಅಜ್ಜಂಪುರದಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ.
ಕಡೂರು ನಗರದ ಅಂಗಡಿ ಮಾಲೀಕರೊಬ್ಬರಿಗೆ ಸೋಂಕು ತಗುಲಿರೋ ಪರಿಣಾಮ ಆತನ ಪತ್ನಿ ಹಾಗೂ ಪುತ್ರನಲ್ಲೂ ಸೋಂಕು ಪತ್ತೆಯಾಗಿದೆ. ಬೆಂಗಳೂರಿಗೆ ಹೋಗಿ ಕಡೂರಿಗೆ ವಾಪಸ್ ಬಂದ ವ್ಯಕ್ತಿಯಲ್ಲೂ ಸೋಂಕು ಪತ್ತೆಯಾಗಿದೆ. ಚಿಕ್ಕಮಗಳೂರಿನ ದೋಣಿಕಣದ ಸರ್ಕಾರಿ ಬಸ್ ಡ್ರೈವರ್ ನಿಂದ ಎಂಟು ಮಂದಿಗೆ ಕೊರೊನಾ ದೃಢವಾಗಿದೆ.
ಕಡೂರು ತಾಲೂಕಿನ ಪಂಚನಹಳ್ಳಿಯ ನಾರಾಯಣಗೌಡನ ಕೊಪ್ಪಲು ಗ್ರಾಮದ ಮಹಿಳೆ ಮತ್ತು ಇಬ್ಬರು ಮಕ್ಕಳಲ್ಲೂ ಕೊರೊನಾ ಸೋಂಕು ಪತ್ತೆಯಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಸಾವು ಸಂಭವಿಸಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಗರದ ಉಪ್ಪಳ್ಳಿ ನಿವಾಸಿ 52 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಸಾವಿನ ಬಳಿಕ ಗಂಟಲು ದ್ರವದ ಪರೀಕ್ಷೆಯಲ್ಲಿ ಮೃತ ಮಹಿಳೆಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.