ಹಾವೇರಿ: ಜಲ ಶುದ್ಧೀಕರಣ ಘಟಕದ ರಿಪೇರಿ ಹಿನ್ನೆಲೆಯಲ್ಲಿ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಬಗ್ಗೆ ನಗರಸಭೆಯು ಸೂಚನೆ ನೀಡಿತ್ತು. ಅಲ್ಲದೆ, ಇದೇ 13ರಿಂದ 17ರ ವರೆಗೆ ನದಿಯ ನೀರನ್ನು ಶುದ್ದೀಕರಣಗೊಳಿಸದೆ, ನೇರವಾಗಿ ಪೂರೈಕೆ ಮಾಡುವ ಕಾರಣ ಅದನ್ನು ಕುಡಿಯಲು ಬಳಿಸದಂತೆ ಎಚ್ಚರಿಕೆ ನೀಡಿತ್ತು. ಆದರೆ ಇಂದಿಗೂ ನಗರಸಭೆಯು ಜಲ ಶುದ್ಧೀಕರಣ ಘಟಕದ ರಿಪೇರಿ ಮಾಡುವಲ್ಲಿ ವಿಫಲವಾಗಿದೆ. ಪರಿಣಾಮ, ಶುದ್ಧೀಕರಣಗೊಳ್ಳದ ನೀರು ಬಳಸಿ, ಹಲವು ರೋಗಗಳನ್ನು ಅನುಭವಿಸುವಂತಾಗಿದೆ ಎಂದು ಹಾವೇರಿ ನಗರದ ನಿವಾಸಿಗಳು ಆರೋಪಿಸಿದ್ದಾರೆ.
ನಗರದಲ್ಲಿ 15 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ: ಹಾವೇರಿ ನಗರಸಭೆಯು 15 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸುತ್ತದೆ ಎಂಬ ಆರೋಪದ ಮಧ್ಯೆ, ಇದೀಗ ಶುದ್ದೀಕರಣಗೊಳ್ಳದ ನೀರು ಪೂರೈಸುತ್ತಿದೆ ಎಂಬ ಆರೋಪವೂ ಸಹ ಕೇಳಿಬಂದಿದೆ. ನಗರಸಭೆಯ ಕೆಲ ಬಡಾವಣೆಗಳಿಗೆ ತಿಂಗಳಿಗೊಮ್ಮೆ, ಮೂರು ವಾರಕ್ಕೊಮ್ಮೆ, ಎರಡು ವಾರಕ್ಕೊಮ್ಮೆ ನೀರು ಪೂರೈಸಲಾಗುತ್ತದೆ. ಅಂತಹದರಲ್ಲಿ, ಇದೀಗ ಶುದ್ಧೀಕರಣ ಮಾಡದೇ, ನೀರು ಪೂರೈಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ವಾಂತಿ-ಭೇದಿ, ಕರುಳುಬೇನೆ, ಟೈಫಾಯಿಡ್ ಸೇರಿದಂತೆ ವಿವಿಧ ರೋಗಗಳಿಂದ ಬಳಲುತ್ತಿದ್ದಾರೆ.
ಮಳೆಗಾಲದಲ್ಲೇ ಈ ರೀತಿಯಾದರೆ ಮುಂದೆ ಹೇಗೆ?: ಹಾವೇರಿಗೆ ಕಂಚಾರಗಟ್ಟಿ ಜಾಕವೇಲ್‌ನಿಂದ ತುಂಗಭದ್ರಾ ನದಿಯಿಂದ ನೀರು ಪೂರೈಕೆಯಾಗುತ್ತಿದೆ. ಕರ್ಜಗಿಯ ವರದಾ ನದಿಯಿಂದ ನೀರು ಪೂರೈಸಬಹುದಾಗಿದೆ. ಈ ಮಧ್ಯೆ ಹೆಗ್ಗೇರಿಯಿಂದಲೂ ಸಹ ನೀರು ಪೂರೈಕೆ ಮಾಡಬಹುದಾಗಿದೆ. ಆದರೆ ಮಳೆಗಾಲದಲ್ಲಿ ಇಷ್ಟೆಲ್ಲಾ ನೀರಿನ ಸಂಪನ್ಮೂಲವಿದ್ದರೂ ಹಾವೇರಿ ನಗರಕ್ಕೆ ನಗರಸಭೆ ಕೆಲ ಬಡಾವಣೆಗಳಿಗೆ ತಿಂಗಳಿಗೊಮ್ಮೆ, ತಿಂಗಳಿಗೆ ಎರಡು ಬಾರಿ ನೀರು ಪೂರೈಸುತ್ತಿದೆ. ಇನ್ನು ಬೇಸಿಗೆಯಲ್ಲಿ ಜಲ ಶುದ್ಧೀಕರಣ ರಿಪೇರಿ ಮಾಡದೆ, ಮಳೆಗಾಲದಲ್ಲಿ ರಿಪೇರಿ ಕೈಗೊಂಡಿರುವುದು ಈ ಅವ್ಯವಸ್ಥೆಗೆ ಕಾರಣ ಎಂದು ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ.
ಶುದ್ದೀಕರಣ ಘಟಕದಲ್ಲಿ ನೀರು ಶುದ್ದೀಕರಣಗೊಳ್ಳುತ್ತಿಲ್ಲ: ಜಲ ಶುದ್ದೀಕರಣ ಘಟಕಕ್ಕೆ ಬರುವ ನದಿಯ ನೀರು ಈಗಲೂ ಸಹ ಸರಿಯಾಗಿ ಶುದ್ದೀಕರಣ ಆಗುತ್ತಿಲ್ಲ. ಸರಿಯಾದ ಹಾಲಮ್ ಹಾಕುವುದಿಲ್ಲ, ಕ್ಲೋರಿನ್ ಟ್ರೀಟ್ಮೆಂಟ್ ಇಲ್ಲ. ಅಲ್ಲದೆ, ಟಿಡಿಎಸ್ ಸಹ ಚೆಕ್ ಮಾಡದೇ, ನಗರಕ್ಕೆ ನೀರು ಪೂರೈಕೆ ಆರಂಭಿಸಲಾಗಿದೆ. ಇದರಿಂದ ಸಹ ಹಾವೇರಿ ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾವೇರಿ ನಗರಸಭೆ ಜನಪ್ರತಿನಿಧಿಗಳು, ಅಧಿಕಾರಿಗಳು ಜಲಶುದ್ದೀಕರಣಕ್ಕೆ ಹೆಚ್ಚು ಒತ್ತು ನೀಡಿ, ಕುಡಿಯಲು ಯೋಗ್ಯವಾದ ನೀರನ್ನು ನಗರಕ್ಕೆ ಪೂರೈಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.