ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಇನ್ನಿಲ್ಲದ ಪ್ರಯತ್ನಕ್ಕೆ ಮುಂದಾಗಿದೆ. ಸೀನಿಯರ್ ಸಿಟಿಜನ್‍ಗಳನ್ನ ಲಾಕ್ ಮಾಡಲು ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 23 ಸಾವಿರ ಗಡಿ ದಾಟಿದೆ. ಅದರಲ್ಲೂ ಮಹಾನಗರಿ ಬೆಂಗಳೂರಲ್ಲಿ ಪ್ರತಿದಿನ ಸಾವಿರಕ್ಕೂ ಅಧಿಕ ಕೇಸ್‍ಗಳು ಬರ್ತಿವೆ. ಸೋಂಕು ನಿಯಂತ್ರಣಕ್ಕೆ ಸರ್ಕಾರ ನಾನಾ ಕಸರತ್ತು ಮಾಡ್ತಿದೆ. ರಾಜ್ಯದಲ್ಲಿ ಹಿರಿಯ ನಾಗರೀಕರನ್ನ ಮನೆಯಿಂದ ಹೊರ ಬರದಂತೆ ತಡೆಯಲು ಹೊಸ ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ.
ಹೌದು. ಕೊರೊನಾ ವೈರಸ್ 60 ವರ್ಷ ಮೇಲ್ಪಟ್ಟವರಿಗೆ ಹೆಚ್ಚು ಅಪಾಯಕಾರಿಯಾದ್ದರಿಂದ ಹಿರಿಯ ನಾಗರಿಕರನ್ನ ಲಾಕ್‍ಡೌನ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಕೊರೊನಾ ನಿಯಂತ್ರಣಕ್ಕೆ ಬರುವವರೆಗೆ ಒಂದಷ್ಟು ತಿಂಗಳುಗಳ ಕಾಲ ಹಿರಿಯ ನಾಗರಿಕರನ್ನ ಹೋಂ ಐಸೋಲೇಶನ್ ಮಾಡಲು ಸರ್ಕಾರ ನಿರ್ಧರಿಸಿದೆ. ಸೋಂಕು ನಿವಾರಣೆ ಆಗುವವರೆಗೂ 60 ವರ್ಷ ಮೇಲ್ಪಟ್ಟವರು ಮನೆಯಲ್ಲೇ ಇದ್ದರೆ ಸೋಂಕು ಹರಡುವಿಕೆ ಕ್ರಮೇಣ ಕಡಿಮೆಯಾಗಬಹುದೇನೋ ಅಂತ ಸರ್ಕಾರ ಲೆಕ್ಕಾಚಾರ ಹಾಕ್ತಿದೆ. ಈ ಬಗ್ಗೆ ಶೀಘ್ರವಾಗಿ ಅಧಿಕೃತವಾದ ಕಾನೂನು ರೂಪುಗೊಳ್ಳುವ ಸಾಧ್ಯತೆ ಇದೆ.
ಸರ್ಕಾರ ಹೇರಬಹುದಾದ ನಿರ್ಬಂಧಗಳೇನು?
– 60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರ ಬರುವಂತಿಲ್ಲ
– ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ಕ್ವಾರಂಟೈನ್
– ಪಾರ್ಕ್‍ಗಳಿಗೆ ಅಥವಾ ವಾಕಿಂಗ್ ಮಾಡಲು ಹೊರಗೆ ಬರುವಂತಿಲ್ಲ
– ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹೋಂ ಐಸೋಲೇಷನ್
– ಮನೆಯಿಂದ ಹೊರ ಬರುವ ಎಲ್ಲಾ ಅವಕಾಶಗಳನ್ನು ನಿರ್ಬಂಧಿಸುವುದು
ಹೀಗೆ ಹಲವು ನಿಯಮಗಳನ್ನೂ ರೂಪಿಸಿ ಕೊರೊನಾದಿಂದ ಹಿರಿಯ ನಾಗರಿಕರನ್ನ ಪಾರು ಮಾಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಕಾನೂನು ಜಾರಿಗೆ ಈಗಾಗಲೇ ತೀರ್ಮಾನ ಮಾಡಲಾಗಿದೆ. ಅಂತಿಮವಾಗಿ ಸೂಕ್ತ ತಜ್ಞರೊಂದಿಗೆ ಚರ್ಚಿಸಿ ಅಂತಿಮ ಕರಡು ಸಿದ್ದಪಡಿಸಿ ಕಾನೂನು ರೂಪಿಸಲಾಗುತ್ತೆ. ಶೀಘ್ರವಾಗಿ ಹೊಸ ಕಾನೂನು ಜಾರಿಗೆ ಬರುವ ಸಾಧ್ಯತೆ ಇದೆ.