ಬೆಂಗಳೂರು: ಹನ್ನೆರಡು ಸಾವಿರದಷ್ಟು ಬೃಹತ್ ಸಂಖ್ಯೆಯ ಉದ್ಯೋಗಿಗಳನ್ನು ಕೆಲಸದಿಂದ ತಗೆದುಹಾಕುವುದಕ್ಕೆ ಸಂಬಂಧಪಟ್ಟಂತೆ ವಿವರಣೆ ಕೇಳಿ ರಾಜ್ಯ ಕಾರ್ಮಿಕ ಇಲಾಖೆಯು ದೇಶದ ಐಟಿ ವಲಯದ ದಿಗ್ಗಜ ಕಂಪನಿ ಟಿಸಿಎಸ್ (ಟಾಟಾ ಕನ್ಸಲ್ಟ್ಎನ್ಸಿ ಸರ್ವೀಸಸ್) ಗೆ ಸಮನ್ಸ್ ಜಾರಿ ಮಾಡಿದೆ.
ಅಪಾರ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವ ಬಗ್ಗೆ ಕಾರಣಗಳನ್ನು ರಾಜ್ಯ ಸರ್ಕಾರಕ್ಕೆ ತಿಳಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಟಿಸಿಎಸ್ ಅಧಿಕಾರಿಗಳ ಸಭೆಯನ್ನು ಸಹ ಕರೆಯಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಟಿಸಿಎಸ್ ಕಂಪನಿ 12 ಸಾವಿರದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತಗೆದುಹಾಕುವ ಕುರಿತು ಘೋಷಣೆ ಮಾಡಿದೆ ಎನ್ನುವ ಸುದ್ದಿಯನ್ನು ಮಾದ್ಯಮಗಳಲ್ಲಿ ಗಮನಿಸಿದ್ದೇನೆ. ಈ ಬಗ್ಗೆ ವಿವರಣೆಗಳನ್ನು ನೀಡುವಂತೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪನಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಲಾಡ್ ಹೇಳಿದ್ದಾರೆ.
ಅಪಾರ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವ ಸಂದರ್ಭದಲ್ಲಿ ಕಂಪನಿಗಳು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಬೇಕಾಗುತ್ತದೆ. ಟಿಸಿಎಸ್ನಂತಹ ಐಟಿ ಕಂಪನಿಗಳಿಗೆ ಕಾರ್ಮಿಕ ಕಾನೂನುಗಳಿಂದ ವಿನಾಯಿತಿ ನೀಡಲಾಗಿದೆಯಾದರೂ, ಕೆಲವೊಂದು ಷರತ್ತುಗಳು ಅನ್ವಯವಾಗುತ್ತವೆ
ಎಂದು ತಿಳಿಸಿದ ಸಚಿವ ಲಾಡ್, ಟಿಸಿಎಸ್ಗೆ ಕಳೆದ 5 ವರ್ಷಗಳಿಂದಲೂ ಕಾರ್ಮಿಕ ಕಾನೂನಿನ ವಿನಾಯಿತಿಯನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ.