ಬೆಂಗಳೂರು : ಪಾನಿಪುರಿ ತಿನ್ನಲು ಹೋದಾಗ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ನಂದಿನಿ ಲೇಔಟ್ ನಿವಾಸಿಯಾಗಿದ್ದ ಅರುಣ್ ಕುಮಾರ್ (24) ಮೃತ ಯುವಕ. ಜುಲೈ19ರಂದು ಐದಾರು ಯುವಕರು ಮಾರಕಾಸ್ತ್ರಗಳಿಂದ ನಡೆಸಿದ್ದ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅರುಣ್ ಕುಮಾರ್, ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅರುಣ್ ಕುಮಾರ್, ಜುಲೈ 19 ರಂದು ರಾತ್ರಿ 10 ಗಂಟೆಗೆ ಪಾನಿಪುರಿ ತಿಂದು ಬರುವುದಾಗಿ ಮನೆಯಲ್ಲಿ ಹೇಳಿ ತೆರಳಿದ್ದ. ಲವಕುಶ ನಗರದ ಜ್ಞಾನವರ್ಧಕ ಶಾಲೆಯ ಬಳಿ ಸ್ನೇಹಿತರೊಂದಿಗೆ ನಿಂತಿದ್ದ ಅರುಣ್ ಕುಮಾರ್ ಬಳಿ ಬಂದಿದ್ದ ಆರೋಪಿಗಳು, ‘ಏರಿಯಾದಲ್ಲಿ ನಿನ್ನದು ಜಾಸ್ತಿಯಾಗಿದೆ’ ಎನ್ನುತ್ತಾ ಅವಾಚ್ಯವಾಗಿ ನಿಂದಿಸಿದ್ದರು. ನೋಡನೋಡುತ್ತಿದ್ದಂತೆ ಅರುಣ್ ಕುಮಾರ್ ಹಾಗೂ ಆತನ ಸ್ನೇಹಿತ ರೋಹಿತ್‌ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅರುಣ್ ಕುಮಾರ್‌ನನ್ನ ಆತನ ಸ್ನೇಹಿತರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅರುಣ್ ಕುಮಾರ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಅರುಣ್ ಕುಮಾರ್‌ನ ತಾಯಿಯ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸದ್ಯ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.