Breaking News

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love

ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ ಅವಲಂಬಿಸಬೇಕಾಗುತ್ತದೆ. ವಯಸ್ಸಾದಂತೆ ಅವರಿಗೆ ವೈದ್ಯಕೀಯ ಆರೈಕೆ ಬೇಕಾಗುತ್ತದೆ. ಆನೇಕರು ವೃದ್ಧರು ಆರ್ಥಿಕ ಸಂಕಷ್ಟಕ್ಕೂ ಸಿಲುಕಿರುತ್ತಾರೆ. ಇದೆಲ್ಲವನ್ನೂ ಮನಗಂಡಿರುವ ಸರ್ಕಾರ, 65 ವರ್ಷದ ಅಥವಾ ಮೇಲ್ಪಟ್ಟ ವೃದ್ಧರಿಗಾಗಿ 2007 ರಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯನ್ನು ಜಾರಿಗೆ ತಂದಿತ್ತು.

ಏನಿದು ಸಂಧ್ಯಾ ಸುರಕ್ಷಾ ಯೋಜನೆ? ಬಡತನ ರೇಖೆಗಿಂತ ಕೆಳಗಿರುವ ಅಸಹಾಯಕ ವೃದ್ಧರು, ವಿಧವೆಯರು, ವಿಶೇಷಚೇತನರು, ಅವಿವಾಹಿತ ಮಹಿಳೆಯರಿಗೆ ಸಹಾಯ ಮಾಡುವ ಉದ್ದೇಶದಿಂದ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸಲು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಕಂದಾಯ ಇಲಾಖೆಯಡಿಯಲ್ಲಿರುವ ಸಾಮಾಜಿಕ ಭದ್ರತಾ ಪಿಂಚಣಿಗಳ ನಿರ್ದೇಶನಾಲಯವು ಈ ಪಿಂಚಣಿ ಯೋಜನೆ ಕಾರ್ಯ ನಿರ್ವಹಿಸುತ್ತಿದೆ.

ಈ ಯೋಜನೆಯಿಂದ ವಯಸ್ಸಾದ ಹಿರಿಯ ನಾಗರಿಕರಿಗೆ ಹಲವು ಪ್ರಯೋಜನೆಗಳಿವೆ. ಸಂಧ್ಯಾ ಸುರಕ್ಷಾ ಯೋಜನೆಯಿಂದ ಅರ್ಹ ಹಿರಿಯ ನಾಗರಿಕರಿಗೆ ತಿಂಗಳಿಗೆ 1,200 ರೂ. ಪಿಂಚಣಿ ಒದಗಿಸುತ್ತದೆ. ಇದರ ಜೊತೆಗೆ ರಾಜ್ಯ ರಸ್ತೆ ಸಾರಿಗೆ ಬಸ್​ಗಳಲ್ಲಿ ಓಡಾಡಲು ರಿಯಾಯಿತಿ ದರದಲ್ಲಿ ಬಸ್ ಪಾಸ್ ಸಿಗುತ್ತದೆ. ಎನ್​ಜಿಒಗಳ ಮೂಲಕ ಅರ್ಹ ಫಲಾನುಭವಿಗಳಿಗೆ ವೈದ್ಯಕೀಯ ಸೌಲಭ್ಯ ನೀಡಲು ಸರ್ಕಾರ ಸಹಕಾರ ನೀಡುತ್ತದೆ. ಅದೇ ರೀತಿ ಮುಜರಾಯಿ ಇಲಾಖೆ ಅಡಿಯಲ್ಲಿ ಬರುವ ದೇವಸ್ಥಾನಗಳಿಗೆ ಭೇಟಿ ನೀಡಲು 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕಾರ್ಡ್ ಸಹ ಸರ್ಕಾರ ಕೆಲ ತಿಂಗಳ ಹಿಂದೆ ಜಾರಿಗೊಳಿಸಿದೆ.

ಸಂಧ್ಯಾ ಸುರಕ್ಷಾ ಪಿಂಚಣಿ ಯೋಜನೆಗೆ ಮಾನದಂಡಗಳೇನು? ಈ ಯೋಜನೆಯ ಪ್ರಯೋಜನ ಪಡೆಯಲು ಸರ್ಕಾರ ಕೆಲವು ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಿದೆ. 65 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಪುರುಷ ಮತ್ತು ಮಹಿಳೆ ಈ ಯೋಜನೆಯನ್ನು ಪಡೆದುಕೊಳ್ಳಬಹುದು. ಅಸಂಘಟಿತ ವಲಯಗಳ ಕೆಲಸಗಾರರು, ಸಣ್ಣ ರೈತರು, ಮೀನುಗಾರರು, ನೇಕಾರರು, ಕೃಷಿ ಕಾರ್ಮಿಕರು ಸೇರಿದಂತೆ ಇತರ ಹಿರಿಯ ನಾಗರಿಕರು ಯೋಜನೆಯಡಿ ಪ್ರಯೋಜನ ಪಡೆದುಕೊಳ್ಳಬಹುದು.

ಈ ಯೋಜನೆ ಪಡೆಯಬೇಕಾದರೆ ಅರ್ಜಿದಾರರು ಮತ್ತು ಅವರ ಪತ್ನಿಯ ಒಟ್ಟು ವಾರ್ಷಿಕ ಆದಾಯ 32 ಸಾವಿರ ರೂ.ಗಿಂತ ಹೆಚ್ಚಿಗೆ ಇರಬಾರದು. ಜೊತೆಗೆ ಯೋಜನೆಗೆ ಅರ್ಹತೆ ಪಡೆಯಲು ಅರ್ಜಿದಾರರ ಬ್ಯಾಂಕ್ ಖಾತೆಯಲ್ಲಿ 10 ಸಾವಿರ ರೂ.ಗಿಂತ ಹೆಚ್ಚಿನ ಉಳಿತಾಯ ಇರಬಾರದು. ಯಾವುದೇ ರೀತಿಯ ಪಿಂಚಣಿಯನ್ನು ಸಾರ್ವಜನಿಕ /ಖಾಸಗಿ ಮೂಲದಿಂದ ಪಡೆಯುತ್ತಿರಬಾರದು. ಫಲಾನುಭವಿಗಳಿಗೆ ಗಂಡು ಮಕ್ಕಳು ಇದ್ದರೂ ಸಹ ಇವರುಗಳು ಫಲಾನುಭವಿಗಳನ್ನು ಪೋಷಿಸದೆ ಇದ್ದಲ್ಲಿ ಈ ಯೋಜನೆಯಡಿ ಮಾಸಾಶನಕ್ಕೆ ಅರ್ಹರಾಗಿರುತ್ತಾರೆ.

ಬೇಕಿರುವ ದಾಖಲೆಗಳು: ವಯಸ್ಸಿನ ಪರಿಶೀಲನೆಗಾಗಿ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್/ ಚಲನಾ ಪರವಾನಗಿ, ಪಡಿತರ ಚೀಟಿ ನೀಡಬೇಕು. ನಿವಾಸದ ದಾಖಲೆ ಅಂದರೆ, ವಿದ್ಯುತ್ ಅಥವಾ ಎಲ್​ಪಿಜಿ ಸಂಪರ್ಕದ ಬಿಲ್, ನೀರಿನ ಬಿಲ್, ಫೋನ್ ಬಿಲ್ ಒದಗಿಸಬೇಕು. ಸಂಬಂಧಿತ ಪ್ರಾಧಿಕಾರದಿಂದ ಸಹಿ ಮಾಡಲಾದ ನಿವಾಸ ಪ್ರಮಾಣ ಪತ್ರವನ್ನು ಸಲ್ಲಿಸಬಹುದು.

ಅರ್ಜಿದಾರರ ಆದಾಯದ ಆಧಾರದ ಮೇಲೆ ಕೆಲವು ನಿರ್ಬಂಧಗಳನ್ನು ಹೊಂದಿರುವುದರಿಂದ 20 ಸಾವಿರ ರೂ.ಗಿಂತ ಕಡಿಮೆ ವಾರ್ಷಿಕ ಆದಾಯವನ್ನು ತೋರಿಸುವ ಇತ್ತೀಚಿನ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಬ್ಯಾಂಕ್ ಖಾತೆ ಮಾಹಿತಿ ನೀಡಬೇಕು. ಇದರ ಜೊತೆಗೆ ತಾಲೂಕಿನ ತಹಶೀಲ್ದಾರ್ ಸಹಿ ಮಾಡಬೇಕಾದ ವೃತ್ತಿಪರ ಪ್ರಮಾಣಪತ್ರ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವುದೇಗೆ? ಅರ್ಜಿ ನಮೂನೆಯನ್ನು ಅಧಿಕೃತ ವೆಬ್​​ಸೈಟ್​​ನಿಂದ ಡೌನ್​ಲೋಡ್ ಮಾಡಿ, ಎಲ್ಲಾ ವಿವರಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಸ್ವೀಕೃತಿ ನಮೂನೆ, ಉದ್ಯೋಗ ಪ್ರಮಾಣಪತ್ರ ಮತ್ತು ಇತರ ಪ್ರಮಾಣಪತ್ರಗಳನ್ನು ಲಗತ್ತಿಸಿ, ಆಯಾ ಗ್ರಾಮ ಪಂಚಾಯಿತಿ ಕಚೇರಿ ಅಥವಾ ಪುರಸಭೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.

“ವಯಸ್ಸಾದ ನಾವು ಪ್ರತಿಯೊಂದಕ್ಕೂ ಮಕ್ಕಳನ್ನೇ ಕೇಳಬೇಕಾಗುತ್ತದೆ. ಸಂಧ್ಯಾ ಸುರಕ್ಷಾ ಯೋಜನೆ ನಮ್ಮಂತ ವೃದ್ಧರಿಗೆ ಅನುಕೂಲವಾಗಿದೆ. ವಯಸ್ಸಾದ ಮೇಲೆ ಆರೋಗ್ಯ ಸಮಸ್ಯೆ ಬರುವುದು ಸಹಜ. ನಮ್ಮ ಬಳಿ ಹಣವಿದ್ದರೆ ತಕ್ಷಣ ಆಸ್ಪತ್ರೆಯಲ್ಲಿ ತೋರಿಸಬಹುದು. ಸಣ್ಣ ಪುಟ್ಟ ಖರ್ಚುಗಳಿಗೂ ಮಕ್ಕಳನ್ನು ಕೇಳುವುದು ತಪ್ಪುತ್ತದೆ” ಎಂದು ವೃದ್ಧ ಚಿಕ್ಕನಂಜಪ್ಪ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

“65 ವರ್ಷ ಮತ್ತು ಅವರಿಗಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸರ್ಕಾರ ಸಂಧ್ಯಾ ಸುರಕ್ಷಾ ಯೋಜನೆ ಜಾರಿಗೆ ತಂದಿದೆ. ಅರ್ಹರಿಗೆ ಮಾಸಿಕ 1,200 ರೂ. ಪಿಂಚಣಿ ನೀಡಲಾಗುತ್ತದೆ. ಕಂದಾಯ ಇಲಾಖೆಯ ಅಡಿಯಲ್ಲಿರುವ ಸಾಮಾಜಿಕ ಭದ್ರತಾ ಪಿಂಚಣಿಗಳ ನಿರ್ದೇಶನಾಲಯದಿಂದ ಹಿರಿಯ ನಾಗರಿಕರಿಗೆ ಪಿಂಚಣಿ ನೀಡಲಾಗುತ್ತಿದೆ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಬೆಂಗಳೂರಿನ ಹೋಟೆಲ್ ಶಾಂಗ್ರಿಲಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆ

Spread the love ಬೆಂಗಳೂರಿನ ಹೋಟೆಲ್ ಶಾಂಗ್ರಿಲಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ