ಬೆಂಗಳೂರು: ಸಿಗಂದೂರು ಸೇತುವೆ ಲೋಕಾರ್ಪಣೆ ಹಾಗೂ ವಿವಿಧ ಯೋಜನೆಗಳಿಗೆ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಶಿವಮೊಗ್ಗದ ಈ ಲೋಕಾರ್ಪಣೆ ಕಾರ್ಯಕ್ರಮದ ಬಗ್ಗೆ ಬೇರೆ ಮೂಲದಿಂದ ತಿಳಿದುಕೊಂಡಿದ್ದೇನೆ. ಬಳಿಕ ನಾನು ವೈಯಕ್ತಿಕವಾಗಿ ಮಾತನಾಡುವುದರ ಜೊತೆಗೆ ಜು.11ರಂದು ಕೇಂದ್ರ ರಸ್ತೆ ಸಾರಿಗೆ ಸಚಿವರಿಗೆ ಪತ್ರ ಬರೆದು ವಿಜಯಪುರದಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮ ಇರುವುದರಿಂದ ಶಿವಮೊಗ್ಗದ ಕಾರ್ಯಕ್ರಮವನ್ನು ಮುಂದೂಡುವಂತೆ ಮನವಿ ಮಾಡಿದ್ದೆನು. ಶಿವಮೊಗ್ಗದ ಕಾರ್ಯಕ್ರಮವನ್ನು ರಾಜ್ಯ ಸರ್ಕಾರದ ಜೊತೆ ಸಮಾಲೋಚನೆ ಮಾಡದೇ ಆಯೋಜಿಸಲಾಗಿದೆ. ಮತ್ತು ಸಿಎಂ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಯಾವುದೇ ಪೂರ್ವಸೂಚನೆ ಇಲ್ಲದೆ ನಮೂದಿಸಲಾಗಿದೆ ಎಂದು ತಿಳಿಸಿದ್ದಾರೆ.
ಜು.11ರಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಕಾರ್ಯಕ್ರಮವನ್ನು ಮುಂದೂಡಲು ಒಪ್ಪಿಕೊಂಡಿದ್ದರು. ಆದರೂ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹಾಗಾಗಿ ಈ ಗಂಭೀರ ಶಿಷ್ಟಾಚಾರ ಉಲ್ಲಂಘನೆಯನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಶರಾವತಿ ಹಿನ್ನೀರಿನಲ್ಲಿ ಪ್ರಮುಖ ಸೇತುವೆ ನಿರ್ಮಾಣದ ಪರಿಕಲ್ಪನೆಯನ್ನು 2013ರಲ್ಲಿ ಮಾಡಲಾಗಿತ್ತು. ಬಳಿಕ ಅದನ್ನು ಕೇಂದ್ರ ಸರ್ಕಾರ ಅನುಷ್ಠಾನ ಮಾಡಿದೆ. ತಾಂತ್ರಿಕ ವರದಿ ಪ್ರಕಾರ ಯೋಜನೆಯ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಹಾಗಾಗಿ ಕಾರ್ಯಕ್ರಮವನ್ನು ತುರ್ತಾಗಿ ಆಯೋಜಿಸಬಾರದಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯ ಸರ್ಕಾರದ ಜೊತೆ ಸಮಾಲೋಚನೆ ಮಾಡದೇ ಶಿಷ್ಟಾಚಾರ ಉಲ್ಲಂಘಿಸಿ ಕಾರ್ಯಕ್ರಮ ಆಯೋಜನೆ, ಜೊತೆಗೆ ಆಹ್ವಾನ ಪತ್ರಿಕೆಯಲ್ಲಿ ಉಪಮುಖ್ಯಮಂತ್ರಿ, ಸ್ಪೀಕರ್, ಸಭಾಪತಿ ಹೆಸರಿನ ಮುಂಚೆ ಮಾಜಿ ಮುಖ್ಯಮಂತ್ರಿ ಹೆಸರು ಮುದ್ರಿಸಿರುವುದು ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಇದು ಸಹಕಾರ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಕರ್ನಾಟಕ ಸರ್ಕಾರ ಇಂಥ ಅಸಹಕಾರ ನಡೆಯ ವಿರುದ್ಧ ಅಧಿಕೃತವಾಗಿ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತೆ. ಮುಂದೆ ಎಲ್ಲಾ ಕೇಂದ್ರ ಸಚಿವರುಗಳಿಗೆ ಈ ರೀತಿಯ ಅಸಮಂಜಸ ವರ್ತನೆ ತೋರದಿರಲು ಸಲಹೆ ನೀಡುವಂತೆ ಮನವಿ ಮಾಡುತ್ತೇನೆ ಎಂದು ಸಿಎಂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.