ನೆಲಮಂಗಲ, ಜೂನ್ 29: ಕಾಡುಪ್ರಾಣಿಗಳನ್ನು ಕೊಂದು ಮಾರಾಟ ಮಾಡುತ್ತಿದ್ದ ಜಾಲ ಬೆಂಗಳೂರಿನಲ್ಲಿ (Bengaluru) ಪತ್ತೆಯಾಗಿದೆ. ಬನ್ನೇರುಘಟ್ಟ ಅರಣ್ಯ ವಲಯದಲ್ಲಿ (Bannerghatta Forest Zone) ಜಿಂಕೆ ಮಾಂಸ ಕತ್ತರಿಸುತ್ತಿದ್ದಾಗ ಕಗ್ಗಲೀಪುರ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪ್ರತಾಪ್ (31) ಬಂಧಿತ ಆರೋಪಿ. ಬನ್ನೇರುಘಟ್ಟ ಅರಣ್ಯ ವಲಯದಲ್ಲಿ ಶೆಡ್ ನಿರ್ಮಿಸಿಕೊಂಡು ಆರೋಪಿ ಪ್ರತಾಪ್ ಸೇರಿದಂತೆ ನಾಲ್ವರು ಪ್ರಾಣಿಗಳ ಮಾಂಸ ಕತ್ತರಿಸುತ್ತಿದ್ದರು.
ಈ ಬಗ್ಗೆ ಮಾಹಿತಿ ತಿಳಿದ ಕಗ್ಗಲಿಪುರ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಮೂವರು ಆರೋಪಿಗಳು ಅರಣ್ಯಾಧಿಕಾರಿಗಳ ಮೇಲೆ ಕತ್ತಿ ಬೀಸಿ ಪರಾರಿಯಾಗಿದ್ದು, ಪ್ರತಾಪ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೆಡ್‌ನ ಮಾಲೀಕ ಭೀಮಪ್ಪ, ಬಾಲರಾಜು ಹಾಗೂ ರಮೇಶ್ ಪರಾರಿಯಾದವರು. ಮಾಲೀಕ ಭೀಮಪ್ಪ ಬನ್ನೇರುಘಟ್ಟ ಅರಣ್ಯ ವಲಯದಲ್ಲಿನ ಸಿ.ಕೆ.ಪಾಳ್ಯದ ಶೆಡ್‌ನಲ್ಲಿ ಜಿಂಕೆ ಮಾಂಸ ಸಂಗ್ರಹಿಸಿದ್ದನು.
ಬೇಟೆಯಾಡಿ ಕೊಂದಿದ್ದ ಐದು ಜಿಂಕೆ, ನಾಲ್ಕು ಜಿಂಕೆಗಳ ಮಾಂಸ, ಒಂದು ಕಾಡುಹಂದಿ, ಒಂದು ಸಿಂಗಲ್ ಬ್ಯಾರೆಲ್ ಗನ್, ಒಂದು ಡಬಲ್ ಬ್ಯಾರೆಲ್ ಗನ್, 10 ಕಾರ್ಟ್ರಿಡ್ಜ್, ಕಾಡುಪ್ರಾಣಿಗಳ ಮಾಂಸ ಕಟ್ ಮಾಡಲು ಬಳಸಿದ್ದ ಮಚ್ಚು, ಸಿಲಿಂಡರ್ ಮತ್ತು ಕಾಡುಪ್ರಾಣಿಗಳ ಮಾಂಸ ಸರಬರಾಜು ಮಾಡಲು ಬಳಸಿದ್ದ ಕಾರನ್ನು ಅರಣ್ಯಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆರೋಪಿಗಳು ಕಾಡುಪ್ರಾಣಿಗಳ ಮಾಂಸವನ್ನು ಕೆಜಿಗೆ 3 ರಿಂದ 4 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ
Laxmi News 24×7