ಹಾವೇರಿ: ಸವಣೂರು ತಾಲೂಕಿನ ಕಲಿವಾಳ ಗ್ರಾಮ ಜಿಲ್ಲೆಯ ಚಿಕ್ಕಗ್ರಾಮಗಳಲ್ಲಿ ಒಂದು. ಸುಮಾರು 400 ಮನೆಗಳಿರುವ ಈ ಗ್ರಾಮವೀಗ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸೈನಿಕರನ್ನು ಸೇನೆಗೆ ನೀಡಿದ ಖ್ಯಾತಿ ಗಳಿಸಿದೆ.
ಕಲಿವಾಳದಲ್ಲಿನ ಸುಮಾರು 125 ಸೈನಿಕರು ದೇಶ ಸೇವೆ ಮಾಡುತ್ತಿದ್ದಾರೆ. 20ಕ್ಕೂ ಅಧಿಕ ಜನ ನಿವೃತ್ತರಾಗಿದ್ದು ಪೊಲೀಸ್, ರೈಲು, ಬ್ಯಾಂಕ್ ಸೇರಿದಂತೆ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವು ಮಾಜಿ ಯೋಧರು ಸರ್ಕಾರಿ ಕೆಲಸ ಪಡೆದಿದ್ದಾರೆ. ಭೂಸೇನೆ, ನೌಕಾದಳ, ವಾಯುದಳದಲ್ಲಿ ಗ್ರಾಮದ ಯುವಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸೇನೆಯಲ್ಲಿ ಡ್ರೈವರ್, ಹವಾಲ್ದಾರ್ ಸೇರಿದಂತೆ ಪ್ರಸ್ತುತ ಕರ್ನಲ್ ಹುದ್ದೆಯಲ್ಲೂ ಇಲ್ಲಿನ ಯುವಕರಿದ್ದಾರೆ. ಗ್ರಾಮದ ಒಂದು ಮನೆಯಲ್ಲಿ ನಾಲ್ಕಕ್ಕೆ ನಾಲ್ಕೂ ಜನ ಸೇನೆ ಸೇರಿದ್ದಾರೆ. ಉಳಿದಂತೆ ಮನೆಯಲ್ಲಿ ಇಬ್ಬರು, ಒಬ್ಬರು ಸೇನೆಯಲ್ಲಿದ್ದಾರೆ.
ಈ ಗ್ರಾಮದ ಒಂದಷ್ಟು ಮಂದಿ ಜೈ ಜವಾನ್ ಎಂದು ಸೇನೆ ಸೇರಿದರೆ, ಉಳಿದವರು ಜೈ ಕಿಸಾನ್ ಎಂದು ಕೃಷಿಯಲ್ಲಿ ನಿರತರಾಗಿದ್ದಾರೆ. 1986ರಲ್ಲಿ ಪ್ರಥಮ ಬಾರಿಗೆ ಕಲಿವಾಳ ಗ್ರಾಮದ ಯುವಕ ಸೇನೆ ಸೇರಿದ. ಅಲ್ಲಿಂದ ಯುವ ಜನರಿಗೆ ಸೇನೆಯೇ ಆರಾಧ್ಯ ದೈವ. ಸೇನೆ ಸೇರಲು ಯುವಕರು ತುದಿಗಾಲ ಮೇಲೆ ನಿಲ್ಲುತ್ತಾರೆ. ಬಿ.ಎಸ್.ಎಫ್ ಹಾಗೂ ಸಿ.ಆರ್.ಪಿ.ಎಫ್ ಸೇರಿದಂತೆ ಹಲವು ಸೇನಾ ತುಕಡಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
“ಗ್ರಾಮದೇವಿಯ ಆಶೀರ್ವಾದದಿಂದ ಸೇನೆ ಸೇರಿ ತಾಯ್ನಾಡಿಗಾಗಿ ಯುದ್ದ ಮಾಡಿದ್ದೇವೆ. ಸುರಕ್ಷಿತವಾಗಿ ಬಂದಿದ್ದೇವೆ. ಇದೆಲ್ಲಾ ಗ್ರಾಮದೇವತೆಯ ಆಶೀರ್ವಾದ. ಮಾಜಿ ಯೋಧರ ಯಶೋಗಾಥೆ, ದೇಶಸೇವೆ ಮಾಡುವ ಕಳಕಳಿ ಗ್ರಾಮದ ಯುವಕರು ಸೇನೆ ಸೇರಲು ಕಾರಣ” ಎನ್ನುತ್ತಾರೆ ಮಾಜಿ ಯೋಧ ಶಿವಾನಂದ ದೇಸಾಯಿ.