ಕಾರವಾರ(ಉತ್ತರ ಕನ್ನಡ): ಸಿಡಿಲು ಬಡಿದು ಎರಡು ಮನೆಗಳಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಅಂಕೋಲಾ ತಾಲೂಕಿನ ಹಾರವಾಡದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ಅಂಕೋಲಾ ಹಾರವಾಡದ ಗಾಬಿತವಾಡದಲ್ಲಿ ವಿಠ್ಠಲ ಸೀತಾರಾಮ ನಾಯ್ಕ ಮತ್ತು ಗೀತಾ ನಾರಾಯಣ ಖಾರ್ವಿ ಎಂಬುವರ ಮನೆಗಳಿಗೆ ಹಾನಿಯಾಗಿದೆ. ಮುಂಜಾನೆ ಮನೆಯಲ್ಲಿ ಕೆಲವರು ಎದ್ದು ಕೆಲಸದಲ್ಲಿ ತೊಡಗಿದ್ದ ವೇಳೆ ಇದ್ದಕ್ಕಿದ್ದಂತೆ ಕಣ್ಣೆದುರೇ ಮಿಂಚು ಹಾದು ಹೋಗಿದೆ. ಬಳಿಕ ಇಡೀ ಮನೆ ಹೊಗೆಯಿಂದ ತುಂಬಿಕೊಂಡಿತ್ತು. ಸಿಡಿಲು ಬಡಿತದಿಂದ ಮನೆಯ ಮೀಟರ್ ಬೋರ್ಡ್, ಮನೆಯ ಹೆಂಚು, ವಿದ್ಯುದ್ದೀಪಗಳು, ಯಂತ್ರೋಪಕರಣಗಳಿಗೆ ಹಾನಿಯಾಗಿತ್ತು ಎಂದು ಮನೆಯವರು ತಿಳಿಸಿದ್ದಾರೆ.
ಇನ್ನು ಮನೆಯ ಎದುರಿನ ತೆಂಗಿನ ಮರಕ್ಕೂ ಸಿಡಿಲು ಬಡಿದಿದೆ. ಸಿಡಿಲು ಬಡಿತದಿಂದ ಮನೆಯ ಗೋಡೆ ಹಾಗೂ ನೆಲಕ್ಕೂ ಹಾನಿಯಾಗಿದೆ. ಈ ವೇಳೆ ಮನೆಯಲ್ಲಿ ಕೆಲವರು ಮಲಗಿದ್ದರು. ಅದೃಷ್ಟವಸಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿಡಿಲು ಬಡಿದು ಇಬ್ಬರು ಸಾವು: ಮತ್ತೊಂದೆಡೆ, ಸಿಡಿಲು ಬಡಿದು ಇಬ್ಬರು ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿಂದು ನಡೆದಿದೆ. ಬೀರಪ್ಪ (45), ಸುನೀಲ್ (26) ಎಂಬವರು ಮೃತಪಟ್ಟಿದ್ದಾರೆ. ಓರ್ವ ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆಗೆ ಸಿರುಗುಪ್ಪ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.