ಕುಂದಾಪುರ/ದಾವಣಗೆರೆ: ಕೇರಳ ಹೊರತುಪಡಿಸಿ ದೇಶದಲ್ಲೇ ಅತೀ ಹೆಚ್ಚು ತೆಂಗಿನಕಾಯಿ ಬೆಳೆಯುವ ಕರ್ನಾಟಕ ದಲ್ಲೂ ಈ ಬಾರಿ ಇಳುವರಿ ಕೊರತೆಯಿದ್ದು, ದಿನೇದಿನೆ ಬೆಲೆ ಏರಿಕೆಯಾಗುತ್ತಿದೆ. ಇದೇ ಮೊದಲ ಬಾರಿಗೆ ತೆಂಗಿನಕಾಯಿ ಬೆಲೆ 60 ರೂ. ಗಡಿ ದಾಟಿದೆ. ಇದು ತೆಂಗಿನ ಕಾಯಿ ಮಾರುಕಟ್ಟೆಯ ಸಾರ್ವ ಕಾಲಿಕ ಗರಿಷ್ಠ ಧಾರಣೆ ಯಾಗಿದೆ.
ರೈತರಿಂದಲೇ ಉತ್ತಮ ಗುಣ ಮಟ್ಟದ ಕಾಯಿಗಳನ್ನು 50-52 ರೂ. ದರದಲ್ಲಿ ವ್ಯಾಪಾರಿಗಳು ಖರೀದಿಸುತ್ತಿದ್ದು, ಅಂಗಡಿಗಳಲ್ಲಿ 58-60 ರೂ.ಗೆ ಮಾರುತ್ತಿದ್ದಾರೆ. ಮಂಗಳೂರು ಕೊಬ್ಬರಿ ಕೆ.ಜಿ.ಗೆ 130-140 ರೂ., ತಿಪಟೂರು ಕೊಬ್ಬರಿಗೆ 150 ರೂ. ಧಾರಣೆ ಇದೆ.
ಪ್ರಸ್ತುತ ಕಾರ್ತಿಕ ಮಾಸದಲ್ಲಿ ದೇಗುಲಗಳಲ್ಲಿ ದೀಪೋತ್ಸವ, ಅಯ್ಯಪ್ಪ ಸ್ವಾಮಿ ವ್ರತ ಮತ್ತಿತರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಮದುವೆ, ಮುಂಜಿಯಂಥ ಶುಭ ಕಾರ್ಯಗಳು ಆರಂಭ ವಾಗುತ್ತಿರುವ ಹೊತ್ತಲ್ಲಿ ಬಹುಬಳಕೆಯ ತೆಂಗಿನ ಕಾಯಿ ದರ ಏರಿಕೆ ಗ್ರಾಹಕರ ಜೇಬು ಸುಡುತ್ತಿದೆ.
ಫ್ಯಾಕ್ಟರಿಗಳಿಗೂ ಕಾಯಿ ಕೊರತೆ
ಇತ್ತೀಚೆಗಿನ ವರ್ಷಗಳಲ್ಲಿ ತೆಂಗಿನ ಎಣ್ಣೆಯ ಜತೆಗೆ ಪೌಡರ್‌ನಂತಹ ಕೆಲವು ಉತ್ಪನ್ನಗಳಿಗೂ ತೆಂಗಿನಕಾಯಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಯಾಗು ತ್ತಿದೆ. ಆದರೆ ಈ ವರ್ಷ ಇಳುವರಿ ಕೊರತೆಯಿಂದ ಶೇ. 50 ತೆಂಗಿನಕಾಯಿ ಕಡಿಮೆ ಇದೆ ಎನ್ನುತ್ತಾರೆ ಕುಂದಾಪುರದ ಪೌಡರ್ ಉತ್ಪನ್ನ ತಯಾರಿ ಘಟಕದ ಚಂದ್ರಶೇಖರ್ ಕಲ್ಪತರು. 10 ವರ್ಷಗಳಿಗೊಮ್ಮೆ ಹೀಗೆ ಕೊರತೆ, ಬೆಲೆ ಏರಿಕೆ ಆಗುತ್ತದೆ. ಆದರೆ ಈ ಸಲ ಹೆಚ್ಚು ತೆಂಗು ಬೆಳೆಯುವ ಕೇರಳ, ತಮಿಳುನಾಡು, ಆಂಧ್ರದಲ್ಲೂ ಇಳುವರಿ ಕಡಿಮೆಯಿದೆ.
ಎಲ್ಲಿಂದಲೂ ಸರಬರಾಜು ಆಗುತ್ತಿಲ್ಲ. ಹಾಗಾಗಿ ಬೆಲೆ ನಿರಂತರ ಏರುತ್ತಿದೆ. ಇದರಿಂದ ಪೌಡರ್ ಉತ್ಪನ್ನಗಳ ತಯಾರಿ ವೆಚ್ಚವೂ ದುಬಾರಿಯಾಗಿದೆ. ಕೆ.ಜಿ.ಗೆ 150 – 170 ರೂ. ಇದ್ದ ಪೌಡರ್ ಬೆಲೆ ಈಗ 220-250 ರೂ. ಆಗಿದೆ. ಈ ಪೌಡರ್‌ಗಳಿಗೆ ಬೇಕರಿಗಳಿಂದ ಹೆಚ್ಚಿನ ಬೇಡಿಕೆಯಿದ್ದು, ಸಿಹಿ ತಿಂಡಿಗಳಿಗೆ ಬಳಕೆಯಾಗುತ್ತದೆ. ಕಾರ್ಮಿಕರಿಗೆ ಕೆಲಸ ನಿಲ್ಲಿಸಬಾರದು ಅನ್ನುವ ಕಾರಣಕ್ಕೆ ದುಬಾರಿ ಬೆಲೆ ಕೊಟ್ಟು ಬೇರೆಡೆಗಳಿಂದ ಕಾಯಿ ತರಿಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳುತ್ತಾರೆ.
Laxmi News 24×7