ಬೆಳಗಾವಿ: ರಾಷ್ಟ್ರೀಯ ಬಸವ ಪ್ರತಿಷ್ಠಾನದ ದಶಮಾನೋತ್ಸವ ಅಂಗವಾಗಿ ಬಾಲಿ, ಮಲೇಷಿಯಾ ಹಾಗೂ ಥಾಯ್ಲೆಂಡ್ ದೇಶಗಳಲ್ಲಿ 11 ದಿನಗಳವರೆಗೆ ನಡೆಯಲಿರುವ ‘ಭಾರತ ವಚನ ಸಂಸ್ಕೃತಿ ಯಾತ್ರೆ’ಯಲ್ಲಿ ಪಾಲ್ಗೊಳ್ಳಲು ಬೆಳಗಾವಿಯಿಂದಲೂ ಒಂದು ತಂಡ ವಿದೇಶಕ್ಕೆ ತೆರಳಿದೆ.
ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಈ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಲಿದ್ದಾರೆ.
ಸಾಣೇಹಳ್ಳಿ ಶ್ರೀಗಳ ನೇತೃತ್ವದಲ್ಲಿ ಹಿರಿಯರ ತಂಡವು ಬೆಂಗಳೂರು ವಿಮಾನ ನಿಲ್ದಾಣದಿಂದ ಭಾನುವಾರ ಸಂಜೆ ಪ್ರಯಾಣ ಬೆಳೆಸಿತು.
ಮಾಜಿ ಮುಖ್ಯಮಂತ್ರಿ ಡಿ.ಬಿ.ಸದಾನಂದ ಗೌಡ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಇಸ್ರೊ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣಕುಮಾರ್, ಹಿರಿಯ ಪತ್ರಕರ್ತ ರಂಜಾನ್ ದರ್ಗಾ, ಸಾಹಿತಿ ಪ್ರೊ.ಸಿದ್ದು ಯಾಪಲಪರವಿ ಹಾಗೂ ಬೆಳಗಾವಿ ಜಿಲ್ಲೆಯಿಂದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ, ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ, ಅನ್ನಪೂರ್ಣ ಮಳಗಲಿ, ಮಹಾನಗರ ಘಟಕದ ಉಪಾಧ್ಯಕ್ಷ ಈರಣ್ಣ ಚಿನಗುಡಿ ಕೂಡ ಪಾಲ್ಗೊಂಡಿದ್ದಾರೆ.