ಎಂ.ಕೆ.ಹುಬ್ಬಳ್ಳಿ: ಗೃಹಲಕ್ಷ್ಮಿ ಯೋಜನೆಯಡಿ ಬಂದ 11 ಕಂತು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪಡೆದ ಸಾಲ ಸೇರಿದಂತೆ ₹45 ಸಾವಿರ ಹಣದಲ್ಲಿ ಬೆಳಗಾವಿ ತಾಲ್ಲೂಕಿನ ಕುಕಡೊಳ್ಳಿಯಲ್ಲಿ ತಾಯವ್ವ ಲಕಮೋಜಿ ಅವರು, ಖಾರ ಕುಟ್ಟುವ ಯಂತ್ರ ಖರೀದಿಸಿದ್ದಾರೆ. ಈ ಮೂಲಕ ಸ್ವಾವಲಂಬಿ ಬದುಕಿಗೆ ಹೆಜ್ಜೆ ಇರಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು, ಭಾನುವಾರ ಕುಕಡೊಳ್ಳಿಗೆ ಈ ಯಂತ್ರ ಉದ್ಘಾಟಿಸಿದರು.
‘ಗೃಹಲಕ್ಷ್ಮಿ ಯೋಜನೆ ಬಡ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಿದೆ. ಈ ಯೋಜನೆ ಹಲವು ಮಹಿಳೆಯರು ಬದುಕು ಕಟ್ಟಿಕೊಂಡಿದ್ದಾರೆ. ಯೋಜನೆಯ ಸಾರ್ಥಕತೆಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ?’ ಎಂದರು.
‘ಬಡತನದಲ್ಲೇ ಬದುಕು ಸಾಗಿಸುವ ನಮ್ಮಂಥವರಿಗೆ ಗೃಹಲಕ್ಷ್ಮಿ ಯೋಜನೆ ಆಸರೆಯಾಗಿದೆ. ಈ ಯೋಜನೆಯಡಿ ಬಂದ ₹22 ಸಾವಿರ ಮತ್ತು ಸಾಲದ ಹಣವನ್ನೂ ಸೇರಿಸಿ ಖಾರದ ಗಿರಣಿ ಯಂತ್ರ ಖರೀದಿಸಿದ್ದೇನೆ’ ಎಂದು ತಾಯವ್ವ ಲಕಮೋಜಿ ಹೇಳಿದರು.
ಚನ್ನಬಸಯ್ಯ ಹಿರೇಮಠ, ಬಸಯ್ಯ ಚಿಕ್ಕಮಠ, ವೀರನಗೌಡ ಪಾಟೀಲ, ತಾಯಪ್ಪ ಮರಕಟ್ಟಿ, ಪುಂಡಲಿಕ ಬೈರೋಜಿ, ಕಲ್ಲಪ್ಪ ವಡ್ಡಿನ, ಪರಶುರಾಮ ಕುರುಬರ ಇತರರಿದ್ದರು.