ಉಡುಪಿ: 2023ರ ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ (Congress Party) ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆ (Shakti Scheme) ಕೂಡ ಒಂದಾಗಿದ್ದು, ರಾಜ್ಯಾದ್ಯಂತ ಈ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ದೊರೆಯುತ್ತಿದೆ. ಯೋಜನೆ ಜಾರಿಯಾಗಿ ಒಂದು ವರ್ಷಕ್ಕೂ ಅಧಿಕ ಕಾಲಗಳಾಗಿದ್ದು, ಮಹಿಳೆಯರು ಉಚಿತ ಪ್ರಯಾಣದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ನಿಲ್ಲಿಸುವುದಾಗಿ ಪರೋಕ್ಷ ಹೇಳಿಕೆ ನೀಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ (Dk Shivakumar) ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಯನ್ನ ಹುಟ್ಟುಹಾಕಿದ್ದು, ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಪ್ರತಿಕ್ರಿಯಿಸಿದ್ದಾರೆ.
ಉಡುಪಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಇಡೀ ದೇಶಕ್ಕೆ ಮಾದರಿಯಾಗಿರುವ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು (Guarantee Schemes) ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಶಕ್ತಿ ಯೋಜನೆಯಿಂದ (Shakti Scheme) ಲಕ್ಷಾಂತರ ಮಹಿಳೆಯರಿಗೆ ಅನುಕೂಲ ಆಗಿದೆ. ಯಾರೋ ಒಂದಿಬ್ಬರು ಯೋಜನೆ ನಿಲ್ಲಿಸಿ ಎಂದು ಸರ್ಕಾರಕ್ಕೆ ಹೇಳಿದಾಕ್ಷಣ ಯೋಜನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ.