ವೈವಿಧ್ಯಮಯ ವಿನ್ಯಾಸಗಳ ಆಕಾಶಬುಟ್ಟಿಗಳು ಬೆಳಗಾವಿ ಮಾರುಕಟ್ಟೆಯ ಬಣ್ಣವನ್ನು ಆಕರ್ಷಕಗೊಳಿಸಿದೆ. ತರಕಾರಿ, ಹಣ್ಣು-ಹಂಪಲುಗಳ ರಾಶಿ ಕಾಣಿಸುತ್ತಿದ್ದ ರಸ್ತೆಗಳಲ್ಲಿ ಏಕಾಏಕಿ ಕಾಮನಬಿಲ್ಲಿನಂಥ ಲೋಕ ಸೃಷ್ಟಿಯಾಗಿದೆ. ಆಲಂಕಾರಿಕ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ.
ಸಾಮಾನ್ಯ ಮಾರುಕಟ್ಟೆ ಈಗ ವರ್ಣರಂಜಿತ ರೂಪ ಪಡೆದು ಕಂಗೊಳಿಸುತ್ತಿದೆ.
ಜನರಿಂದ ಕಿಕ್ಕಿರಿದು ಸೇರಿರುವ ಮಾರುಕಟ್ಟೆಗೆ ಕಾಲಿಟ್ಟರೆ ಸಾಕು; ಹೂಮಾಲೆಗಳು, ನಕ್ಷತ್ರಗಳು, ಬಗೆಬಗೆಯ ವಿನ್ಯಾಸಗಳ ಆಭರಣಗಳು, ಬಟ್ಟೆಗಳು, ವಿದ್ಯುದ್ದೀಪಗಳು ಚುಂಬಕಶಕ್ತಿಯಂತೆ ಸೆಳೆಯುತ್ತಿವೆ.
ವರ್ಣರಂಜಿತ ಶಿವನಬುಟ್ಟಿಗಳಂತೂ ಒಂದಕ್ಕಿಂತ ಮತ್ತೊಂದು ಸುಂದರವಾಗಿವೆ. ಅವುಗಳ ಖರೀದಿಗೆ ಅಂಗಡಿಗೆ ಕಾಲಿಟ್ಟರೆ, ಯಾವುದನ್ನು ಖರೀದಿಸಬೇಕೆಂದು ಗ್ರಾಹಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಪ್ಲಾಸ್ಟಿಕ್ ಮಾತ್ರವಲ್ಲ; ಬಿದಿರು, ಕಾಗದ, ಕಟ್ಟಿಗೆ, ಬಟ್ಟೆಯಿಂದ ‘ಕಾರ್ತಿಕ ಬುಟ್ಟಿ’ಗಳೂ ಮಾರುಕಟ್ಟೆ ಆಕ್ರಮಿಸಿಕೊಂಡಿವೆ. ಪರಿಸರ ಸ್ನೇಹಿ ‘ಕಂದೀಲು’ಗಳು ಹೆಚ್ಚಾಗಿ ಜನರನ್ನು ಸೆಳೆಯುತ್ತಿವೆ.
ವಿವಿಧ ವಿನ್ಯಾಸ: ‘ನಾವು 17 ವರ್ಷಗಳಿಂದ ಆಕಾಶಬುಟ್ಟಿ ಮಾರುತ್ತಿದ್ದೇವೆ. ನಾಲ್ಕು ವರ್ಷಗಳಿಂದ ಇತ್ತೀಚೆಗೆ ವೈವಿಧ್ಯಮಯವಾದ ಉತ್ಪನ್ನ ಮಾರುಕಟ್ಟೆ ಪ್ರವೇಶಿಸುತ್ತಿವೆ. ಬಿದಿರಿನಲ್ಲಿ ನಾವೂ ತರಹೇವಾರಿ ಆಕಾಶಬುಟ್ಟಿ ಸಿದ್ಧಪಡಿಸುತ್ತಿದ್ದೇವೆ. ಕೋನ್, ಬೆಲ್ ಶೇಪ್, ದೀಪ, ತುಳಸೀಕಟ್ಟೆ, ಡೈಮಂಡ್, ಷಟ್ಕೋನ, ಸ್ವಸ್ತಿಕ್ ಆಕಾಶ, ನಕ್ಷತ್ರ, ಟ್ರಕ್, ವಿಮಾನ ಮಾದರಿ ಹೆಚ್ಚಾಗಿ ಬಿಕರಿಯಾಗುತ್ತಿವೆ. ₹250ರಿಂದ ₹1,800ರವರೆಗೆ ದರ ಇದೆ’ ಎಂದು ಬುರುಡ ಗಲ್ಲಿಯ ವ್ಯಾಪಾರಿ ಸಂಜಯ ತೆವರೆ ಹೇಳುತ್ತಾರೆ.