ಹುಬ್ಬಳ್ಳಿ: ‘ಇವತ್ತು ಈ ಊರು, ನಾಳೆ ಮತ್ತೊಂದು ಊರು. ನಮ್ಮಂತಹ ಅಲೆಮಾರಿಗಳಿಗೆ ಸ್ವಂತ ಜಾಗ, ಮನೆ ಎಂಬುದು ಇರುವುದಿಲ್ಲ. ಆಶ್ರಯ ಸಿಕ್ಕ ಕಡೆ ಉಳಿಯುತ್ತೇವೆ. ಕೆಲ ದಿನಗಳ ಬಳಿಕ ಮತ್ತೆ ಮುಂದಿನ ಊರಿಗೆ ಪ್ರಯಾಣಿಸುತ್ತೇವೆ. ಆಯಾ ಸಮಯಕ್ಕೆ ಸಿಗುವ ವಸ್ತುಗಳನ್ನು ಮಾರುತ್ತ ಬದುಕುತ್ತೇವೆ’
ತಮ್ಮ ದೈನಂದಿನ ಬದುಕನ್ನು ಹೀಗೆ ಸಂಕ್ಷಿಪ್ತವಾಗಿ ವಿವರಿಸಿದವರು ಮಲ್ಲಶೆಟ್ಟಿ. ಅಲೆಮಾರಿ ಸಮುದಾಯದ ಅವರು ಕುಟುಂಬ ಸದಸ್ಯರ ಜೊತೆಗೆ ಹುಬ್ಬಳ್ಳಿಯ ಆರ್‌ಟಿಒ ಕಚೇರಿ ಬಳಿ ತಾತ್ಕಾಲಿಕ ನೆಲೆ ಕಂಡುಕೊಂಡಿದ್ದಾರೆ. ಅಲ್ಲಿ ರಸ್ತೆ ಬದಿ ಅಲಂಕಾರಿಕ ವಸ್ತುಗಳನ್ನು ಮಾರುತ್ತಾರೆ. ಅವರೊಂದಿಗೆ 25ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದಾರೆ.
ಬೆಂಗಳೂರು ಸಮೀಪದ ರಾಮನಗರ ತಾಲ್ಲೂಕಿನ ಬಿಡದಿ ಊರಿನ ಈ ಅಲೆಮಾರಿ ಸಮುದಾಯದವರು ದೀರ್ಘ ಕಾಲ ಒಂದೇ ಕಡೆ ಉಳಿಯಲ್ಲ. ಸಣ್ಣಪುಟ್ಟ ಕೆಲಸಗಳನ್ನು ಮಾಡುವುದರ ಜೊತೆಗೆ ಅಲಂಕಾರಿಕ ವಸ್ತುಗಳನ್ನು ಮಾರುತ್ತಾರೆ.
‘ನಮ್ಮ ಪೂರ್ವಜರ ಕಾಲದಿಂದ ಸಣ್ಣಪುಟ್ಟ ಕೆಲಸಗಳನ್ನೇ ನಂಬಿದ್ದೇವೆ. ನಮ್ಮವರಲ್ಲಿ ಬಹುತೇಕ ಮಂದಿ ಅಕ್ಷರಸ್ಥರಲ್ಲ. ಕೆಲವರು ಕಾಲೇಜು ಹಂತದವರೆಗೆ ಓದಿದ್ದರೂ ಉದ್ಯೋಗ ಸಿಕ್ಕಿಲ್ಲ. ಆರ್ಥಿಕ ಸಂಕಷ್ಟದಲ್ಲೇ ಎಲ್ಲವನ್ನೂ ನಿಭಾಯಿಸಿಕೊಂಡು ಬದುಕು ನಡೆಸಿದ್ದೇವೆ. ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂಬ ನಂಬಿಕೆ ನಮ್ಮದು’ ಎಂದು ಮಲ್ಲಶೆಟ್ಟಿ ತಿಳಿಸಿದರು.
Laxmi News 24×7