ಬೆಳಗಾವಿ: ಅಕಾಲಿಕ ಮಳೆ ಹಿಂಗಾರಿ ಹಂಗಾಮಿಗೆ ಸಿದ್ಧಗೊಂಡ ರೈತರಿಗೆ ಚಿಂತೆ ತಂದಿಟ್ಟಿವೆ. ಜಿಲ್ಲೆಯ ಹಲವು ರೈತರು ಇನ್ನೂ ಮುಂಗಾರು ಫಸಲಿನ ರಾಶಿಯಲ್ಲಿ ನಿರತರಾಗಿದ್ದಾರೆ. ಮತ್ತಷ್ಟು ರೈತರು ಹಿಂಗಾರಿ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಕಳೆದ ಎರಡು ವಾರಗಳಿಂದ ಸುರಿದ ಮಳೆ ಎರಡೂ ಕೆಲಸಕ್ಕೆ ಅಡಚಣೆ ತಂದೊಡ್ಡಿದೆ.
ಗಾಯದ ಮೇಲೆ ಬರೆ ಎಂಬಂತೆ ಬಿತ್ತನೆ ಬೀಜಗಳ ದರ ಹೆಚ್ಚಳವಾಗಿದೆ.
ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳಾದ ರಾಗಿ, ಗೋಧಿ, ಕಡಲೆ ದರ ತುಸು ಹೆಚ್ಚಾಗಿದೆ. ಜೋಳ, ಶೇಂಗಾ, ಕುಸುಬೆ ಬೀಜಗಳ ದರ ಕಡಿಮೆಯಾಗಿದೆ. ರಾಜ್ಯದ ಅತಿ ಹೆಚ್ಚು ಬಿತ್ತನೆ ಪ್ರದೇಶ ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಇದರ ನೇರ ಪರಿಣಾಮ ತಟ್ಟಿದೆ.
ಕಳೆದ ವರ್ಷ ರಾಜ್ಯದ ಎಲ್ಲೆಡೆ ಬರಗಾಲ ಬಿದ್ದ ಕಾರಣ ಬಿತ್ತನೆ ಬೀಜಗಳ ಕೊರತೆ ಉಂಟಾಗಿದೆ. ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ ಹಾಗೂ ಕರ್ನಾಟಕ ರಾಜ್ಯ ಎಣ್ಣೆಬೀಜ ಬೆಳೆಗಾರರ ಮಹಾಮಂಡಳಿಯಿಂದ ಬಿತ್ತನೆ ಬೀಜಗಳನ್ನು ಬಿತ್ತಲು ರೈತರಿಗೆ ನೀಡಲಾಗಿತ್ತು. ಈಗ ರೈತರಿಂದ ಖರೀದಿ ಮಾಡಲಾಗಿದೆ.
ನಿಗಮ- ಮಂಡಳಿಗಳು ಕೂಡ ರೈತರಿಂದ ಶೇ 23 ಹೆಚ್ಚು ದರ ನೀಡಿ ಖರೀದಿಸಿವೆ. ಅಂಥ ಬೀಜಗಳಿಗೆ ಮಾತ್ರ ಶೇ 9ರಿಂದ ಶೇ 13ರಷ್ಟು ದರ ಹೆಚ್ಚಾಗಿದೆ. ಪರೋಕ್ಷವಾಗಿ ರೈತರಿಗೆ ಹೆಚ್ಚು ಲಾಭವೇ ಹೋಗಿದೆ ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳ ವಿವರ.