ಬೆಂಗಳೂರು: ಶಿಗ್ಗಾವಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಜ್ಜಂ ಪೀರ್ ಖಾದ್ರಿ ಸ್ಪರ್ಧೆಯಿಂದ ಹಿಂದೆಸರಿಯಲು ಒಪ್ಪಿದ್ದಾರೆ. ಖಾದ್ರಿ ಅವರನ್ನು ಮನವೊಲಿಸುವಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಯಶಸ್ವಿಯಾಗಿದ್ದಾರೆ.
ಖಾದ್ರಿ ಅವರನ್ನು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅನ್ವರ್ ಬಾಷಾ, ಧಾರವಾಡ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಜತೆ ಶಿಗ್ಗಾವಿಯಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ ಜಮೀರ್, ಶನಿವಾರ ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿಸಿದರು.
ಖಾದ್ರಿ ಅವರಿಗೆ ರಾಜಕೀಯವಾಗಿ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಹೀಗಾಗಿ, ಇದೇ 30ರಂದು ನಾಮಪತ್ರ ವಾಪಸ್ ಪಡೆಯುವುದಾಗಿ ಅವರು ತಿಳಿಸಿದ್ದಾರೆ.
‘ನನಗೆ ಪಕ್ಷ ಮುಖ್ಯ. ಪಕ್ಷದ ಕಾರ್ಯಕರ್ತರು ಮತ್ತು ನನ್ನ ಅಭಿಮಾನಿಗಳ ಜತೆ ಮಾತನಾಡಿ ಅವರನ್ನು ಒಪ್ಪಿಸಿ, ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ. ಸಿದ್ದರಾಮಯ್ಯ, ಡಿ ಕೆ. ಶಿವಕುಮಾರ್, ಜಮೀರ್ ಅಹಮದ್ ಖಾನ್, ನಸೀರ್ ಅಹಮದ್ ಅವರ ಮಾತಿಗೆ ಒಪ್ಪಿದ್ದೇನೆ’ ಎಂದು ಅಜ್ಜಂ ಪೀರ್ ಖಾದ್ರಿ ಹೇಳಿದರು.
Laxmi News 24×7