ಹುಬ್ಬಳ್ಳಿ: ಶಿಗ್ಗಾವಿ ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಪಕ್ಷದ ನಿರ್ಧಾರವಾಗಿದೆ. ಇದಕ್ಕೂ ಪೂರ್ವ ಅಲ್ಲಿನ ನಾಯಕರ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಅಂತಿಮಗೊಳಿಸಲಾಗಿದೆ. ರಾಜ್ಯದಿಂದ ಕಳುಹಿಸಿದ ಪಟ್ಟಿಯನ್ನು ಹೈಕಮಾಂಡ್ ಪರಿಗಣಿಸಿರಬಹುದು ಎಂದು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರ್ ಕಮಿಟಿಯಲ್ಲಿ ನಾನಿಲ್ಲದ ಕಾರಣ ಅಲ್ಲಿ ಏನು ಚರ್ಚೆಯಾಗಿದೆ, ಪಟ್ಟಿಯಲ್ಲಿ ಯಾರ ಹೆಸರಿತ್ತು ಎಂಬುವುದು ಗೊತ್ತಿಲ್ಲ. ಆದರೆ ರಾಜ್ಯ ನಾಯಕರು ಕಳುಹಿಸಿರುವ ಪಟ್ಟಿಯನ್ನೇ ಅಂತಿಮಗೊಳಿಸಿರುವ ಸಾಧ್ಯತೆಗಳಿವೆ. ಉಪ ಚುನಾವಣೆಯಲ್ಲಿ ಕುಟುಂಬದವರಿಗೆ ಟಿಕೆಟ್ ನೀಡಿದಾಕ್ಷಣ ಕುಟುಂಬ ರಾಜಕಾರಣ ಎಂದು ಹೇಳಲು ಬರುವುದಿಲ್ಲ. ಈ ನಿರ್ಧಾರವು ಅಲ್ಲಿನ ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದು ಸ್ಪಷ್ಟಪಡಿಸಿದರು.
ಸಿ.ಪಿ.ಯೋಗೀಶ್ವರ ಆಗಬಹುದು: ಉಪ ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯವಾಗಿರುತ್ತದೆ. ಈ ಎಲ್ಲಾ ಮಾನದಂಡಗಳನ್ನು ಪರಿಗಣಿಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿರುತ್ತದೆ. ಚನ್ನಪಟ್ಟಣ ಕ್ಷೇತ್ರಕ್ಕೆ ಸಿ.ಪಿ.ಯೋಗೇಶ್ವರ ಅವರು ಎನ್.ಡಿ.ಎ ಮೈತ್ರಿ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ನಿರೀಕ್ಷೆಯಿದೆ. ಆ ಭಾಗದಲ್ಲಿ ಕಳೆದ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಯೋಗೇಶ್ವರ ಅವರ ಶ್ರಮ ಹಾಗೂ ಪ್ರಯತ್ನ ಸಾಕಷ್ಟಿದೆ. ಅನುಭವಿ ರಾಜಕಾರಣಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.