ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ವೇಗ ಪಡೆದುಕೊಂಡಿದೆ. ಎರಡನೇ ವಿಮಾನ ನಿಲ್ದಾಣಕ್ಕೆ ಸ್ಥಳ ನಿಗದಿ ಮಾಡಲು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ, ಡಿಸಿಎಂ ಡಿ.ಕೆ. ಶಿವಕುಮಾರ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಶುಕ್ರವಾರ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ಐದು ಸ್ಥಳಗಳನ್ನು ಗುರುತಿಸಲಾಗಿದ್ದು, ಮುಂದಿನ ವಾರದೊಳಗೆ ಸ್ಥಳವನ್ನು ಅಂತಿಮಗೊಳಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಡಾಬಸ್‌ಪೇಟೆ, ನೆಲಮಂಗಲ, ಬಿಡದಿ, ಹಾರೋಹಳ್ಳಿ ಸೇರಿದಂತೆ ಐದು ಸ್ಥಳಗಳನ್ನು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಗುರುತಿಸಲಾಗಿದೆ. ಶುಕ್ರವಾರ ನಡೆದ ಸಭೆಯಲ್ಲಿ ಮತ್ತೊಂದು ಸ್ಥಳದ ಬಗ್ಗೆ ಕೂಡ ಚರ್ಚೆ ನಡೆಸಲಾಗಿದ್ದು, ಇನ್ನೊಂದು ವಾರದಲ್ಲಿ ಸ್ಥಳ ನಿಗದಿ ಮಾಡಲಾಗುವುದು ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
ನೆಲಮಂಗಲ ಸಮೀಪದ ಸ್ಥಳವೇ ಅಂತಿಮ
ಈಗ ಗುರುತಿಸಿರುವ ಐದು ಸ್ಥಳಗಳಲ್ಲಿ ನೆಲಮಂಗಲ-ಕುಣಿಗಲ್ ರಾಷ್ಟ್ರೀಯ ಹೆದ್ದಾರಿ 75 ಪಕ್ಕದಲ್ಲಿರುವ ಸ್ಥಳವನ್ನೇ ಬಹುತೇಕ ಅಂತಿಮಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಎಲ್ಲಾ ದೃಷ್ಟಿಯಿಂದಲೂ ಈ ಸ್ಥಳವೇ ಉತ್ತಮ ಆಯ್ಕೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ನೆಲಮಂಗಲ – ಕುಣಿಗಲ್ ನಡುವಿನ ರಾಷ್ಟ್ರಿಯ ಹೆದ್ದಾರಿ 75ರ ಸಮೀಪವೇ ಈ ಸ್ಥಳವನ್ನು ಗುರುತಿಸಲಾಗಿದೆ.
ಬೆಂಗಳೂರಿಗೆ ಉತ್ತಮ ರಸ್ತೆ ಸಂಪರ್ಕವಿದ್ದು, ನೆಲಮಂಗಲದವರೆಗೆ ಮೆಟ್ರೋ ಮಾರ್ಗ ವಿಸ್ತರಣೆ ಯೋಜನೆ ಕೂಡ ಇರುವುದರಿಂದ ಸಂಪರ್ಕ ಕೂಡ ಸುಲಭವಾಗಲಿದೆ. ಇಲ್ಲಿ ಗುರುತಿಸಿರುವ ಸ್ಥಳದಲ್ಲಿ ಸರ್ಕಾರಿ ಜಮೀನು ಕೂಡ ಹೆಚ್ಚಾಗಿರುವ ಕಾರಣ, ಖಾಸಗಿ ಜಮೀನಿಗೆ ನೀಡಬೇಕಾದ ವೆಚ್ಚದ ಪ್ರಮಾಣ ಕೂಡ ಕಡಿಮೆಯಾಗುವುದರಿಂದ ಸರ್ಕಾರ ಈ ಸ್ಥಳವನ್ನೇ ಅಂತಿಮಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.