ಬೆಂಗಳೂರು, ಅಕ್ಟೋಬರ್ 10: ಗಣಿಗಾರಿಕೆ ಅಕ್ರಮಗಳ ಕುರಿತ ತನಿಖೆಯ ಎಸ್‌ಐಟಿ ಕಾರ್ಯಾವಧಿಯನ್ನು ಜುಲೈ 1ರಿಂದ ಒಂದು ವರ್ಷ ವಿಸ್ತರಿಸಿದೆ. ಇಂದು ಸಿಎಂ ಸಿದ್ದರಾಮಯ್ಯ(Siddaramaiah)ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ಕೆ ಪಾಟೀಲ್, ಗಣಿಗಾರಿಕೆ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ಇದೀಗ ಅದರ ಅವಧಿ ಮುಕ್ತಾಯವಾಗಿದ್ದು, ಇನ್ನೂ ಒಂದು ವರ್ಷದವರೆಗೆ ಅಧಿಕಾರಾವಧಿಯನ್ನು ವಿಸ್ತರಿಸಲು ಇಂದಿನ ಸಂಪುಟ ಸಭೆ ಅಸ್ತು ಎಂದಿದೆ. 113 ಗಣಿ ಪ್ರಕರಣಗಳು ಬಾಕಿ ಇವೆ. ಎರಡು ಪ್ರಕರಣಗಳು ಹೈಕೋರ್ಟ್ನಲ್ಲಿವೆ. ಎಂಟು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.