ಮಳವಳ್ಳಿ: ‘ಶಾಸಕರಾಗಿದ್ದಾಗ ತಾಲ್ಲೂಕಿಗೆ ಒಂದೇ ಒಂದು ನೀರಾವರಿ ಯೋಜನೆ ತರಲು ಯೋಗ್ಯತೆ ಇಲ್ಲದವರು ಕೆರೆ ಕಟ್ಟೆಗಳಿಗೆ ನೀರು ತುಂಬಿಸುವುದರ ಬಗ್ಗೆ ನನಗೆ ಪಾಠ ಮಾಡಲು ಬರುತ್ತಾರೆ’ ಎಂದು ಮಾಜಿ ಶಾಸಕ ಕೆ.ಅನ್ನದಾನಿ ವಿರುದ್ಧ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕಿಡಿಕಾರಿದರು.
‘ಶಾಸಕನಾಗಿದ್ದ ವೇಳೆ ಯಾವ ಯೋಜನೆಯನ್ನು ಕ್ಷೇತ್ರಕ್ಕೆ ತರಲು ಆಗದವರು ನನ್ನ ಅವಧಿಯ ಪಟ್ಟಣದ ಕುಡಿಯುವ ನೀರಿನ ಯೋಜನೆ, ಕಿರುಗಾವಲು ಬಹುಗ್ರಾಮ ಕುಡಿಯುವ ನೀರು ಯೋಜನೆ, ತಿಟ್ಟಮಾರನಹಳ್ಳಿ ಏತ ನೀರಾವರಿ ಯೋಜನೆ, ಪೂರಿಗಾಲಿ ಹನಿ ನೀರಾವರಿ ಯೋಜನೆ ಸೇರಿ ಹಲವು ಯೋಜನೆಗಳನ್ನು ಹಳ್ಳಹಿಡಿಸಿದ ಮಹಾನುಭವ ಕೆರೆಗಳಿಗೆ ಬಾಗಿನ ಅರ್ಪಿಸುವುದನ್ನು ಟೀಕಿಸುತ್ತಾರೆ’ ಎಂದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿ ಮಾತನಾಡಿ ಮಾಜಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು. ‘ ಕೆಲಸ ಮಾಡುವವರಿಗೆ ಅಡ್ಡಗಾಲು ಹಾಕಿ ಓಡುವವರಿಗೆ ತೊಡರುಗಾಲು ಹಾಕುವ ಆಟ ಹೆಚ್ಚು ದಿನ ನಡೆಯುವುದಿಲ್ಲ’ ಎಂದರು.